ಶನಿವಾರಸಂತೆ, ಜೂ. 21: ಬ್ಯಾಡಗೊಟ್ಟ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಳಗೂರು ಒಂದು ಕುಗ್ರಾಮ. ಸುಮಾರು 40 ಕುಟುಂಬಗಳು ಇಲ್ಲಿ ನೆಲೆಸಿದ್ದು, 80 ಭಾಗ ಪರಿಶಿಷ್ಟ ಜಾತಿಯವರು ವಾಸ ಮಾಡುತ್ತಿದ್ದಾರೆ. ಈ ಗ್ರಾಮದ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇದುವರೆಗೂ ತೆರೆದ ಬಾವಿಯ ನೀರನ್ನು ಹಗ್ಗದ ಸಹಾಯದಿಂದ ಸೇದಿ ಉಪಯೋಗಿಸುತ್ತಿದ್ದರು. ಇತ್ತೀಚೆಗೆ 2 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಕಿರು ನೀರು ಸರಬರಾಜು ಯೋಜನೆಯಡಿ ಗ್ರಾಮಕ್ಕೆ ಬೋರ್‍ವೆಲ್‍ವೊಂದನ್ನು ಕೊರೆಯಿಸಿ ಅರ್ಧಕ್ಕೆ ಕೈ ಬಿಡಲಾಗಿತ್ತು. ಇದೀಗ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪ್ರಯತ್ನದಿಂದ ಈ ಬೋರ್‍ವೆಲ್‍ಗೆ ಜಿಲ್ಲಾ ಪಂಚಾಯಿತಿ ವತಿಯಿಂದ ವಿದ್ಯುಚ್ಛಕ್ತಿ, ನೀರಿನ ಸಿಷ್ಟನ್, ಪೈಪ್‍ಲೈನ್ ಅಳವಡಿಸಿ ಇಂದು ತಳಗೂರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿದೆ.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೆ. ದಿನೇಶ್ ತಳಗೂರು ಗ್ರಾಮದ ಕುಡಿಯುವ ನೀರಿನ ಸಿಸ್ಟಮ್‍ಗೆ ಚಾಲನೆ ನೀಡಿದರು. ನಂತರ ನಡೆದ ಸರಳ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಬಿ.ಕೆ. ದಿನೇಶ್, ಬಿ.ಇ. ಹೇಮಾವತಿ ಈರಪ್ಪ, ರೇಣುಕಾ ಮೇದಪ್ಪ, ಸಾವಿತ್ರಿ ಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯ ಮಲ್ಲೇಶ್ ಅವರುಗಳು ಮಾತನಾಡಿದರು.

ಗ್ರಾಮದ ಮಾಜಿ ಅಧ್ಯಕ್ಷ ಟಿ.ಪಿ. ಚಿನ್ನಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸ್ಥರಾದ ಲಿಂಗರಾಜ್, ಯಶವಂತಕುಮಾರ್, ಸುರೇಶ್, ಸಂದೀಪ್, ವೇದಾವತಿ, ರೇಣುಕ, ಪ್ರೇಮ, ತನುಜ, ಇತರರಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಮಲ್ಲೇಶ್ ಸ್ವಾಗತಿಸಿ, ವಂದಿಸಿದರು.