ಸೋಮವಾರಪೇಟೆ, ಜು. 1: ನಗರದ ಗ್ರಂಥಾಲಯ ಕಚೇರಿ ಕಟ್ಟಡವೀಗ ತ್ಯಾಜ್ಯ ಸುರಿಯುವ ಸ್ಥಳವಾಗಿ ಮಾರ್ಪಟ್ಟಿದ್ದು, ಬುದ್ಧಿವಂತ ಮಾನವರು(!) ತಮ್ಮ ಮನೆ, ಅಂಗಡಿಗಳ ಕಸವನ್ನು ಈ ಸ್ಥಳದಲ್ಲಿ ಸುರಿಯುವ ಮೂಲಕ ಜ್ಞಾನ ಸಂಪಾದಿಸುವ ಜಾಗವನ್ನು ಕಸದ ಕೊಂಪೆಯನ್ನಾಗಿಸುತ್ತಿದ್ದಾರೆ.
ಗ್ರಂಥಾಲಯ ಕಟ್ಟಡದ ಮೂರು ಬದಿಯೂ ಆವರಣಗೋಡೆ ನಿರ್ಮಿಸಿದ್ದು, ಒಂದು ಪಾಶ್ರ್ವದಲ್ಲಿ ಮಾತ್ರ ಹಾಗೆಯೇ ಬಿಟ್ಟಿದ್ದಾರೆ. ಗ್ರಂಥಾಲಯದ ಮೇಲ್ವಿಚಾರಕರ ಮನೆ, ಶೌಚಾಲಯ ಇರುವ ಪ್ರದೇಶದಲ್ಲಿ ಒಂದಿಷ್ಟು ಖಾಲಿ ಜಾಗವಿದ್ದು, ಈ ಜಾಗದಲ್ಲಿ ಕೆಲವರು ತ್ಯಾಜ್ಯ ಸುರಿಯುತ್ತಿದ್ದಾರೆ. ಕೊಳೆತ ಟೊಮೇಟೋ, ತರಕಾರಿ, ಕಾಗದ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಯಾರಿಗೂ ಗೊತ್ತಾಗದಂತೆ ತಂದು ಇಲ್ಲಿ ಸುರಿಯುತ್ತಿದ್ದಾರೆ. ದಿನಕಳೆದಂತೆ ಕೊಳೆಯುತ್ತಿರುವ ವಸ್ತುಗಳು ಗಬ್ಬೆದ್ದು ನಾರುತ್ತಿದ್ದು, ಕ್ರಿಮಿಕೀಟಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ತಮ್ಮ ಮನೆ, ಕಚೇರಿಯ ಕಸವನ್ನು ಇಲ್ಲಿ ತಂದು ಸುರಿಯುತ್ತಿರುವ ಕೊಳಕು ಮನಸ್ಥಿತಿಯವರು ಇನ್ನಾದರೂ ತಮ್ಮ ಮನಃಪರಿವರ್ತನೆ ಮಾಡಿಕೊಳ್ಳಲಿ. ನೂರಾರು ಮಂದಿ ಕುಳಿತು ಓದುವ ಗ್ರಂಥಾಲಯ ಆವರಣ ಗಬ್ಬೆದ್ದು ನಾರದಿರಲಿ. ಸಂಬಂಧಿಸಿದವರು ಈ ಸ್ಥಳದಲ್ಲಿ ಆವರಣ ಗೋಡೆ ನಿರ್ಮಿಸಲು ಮುಂದಾಗಲಿ.
- ವಿಜಯ್ ಹಾನಗಲ್