ಶ್ರೀಮಂಗಲ, ಜೂ. 27: ಟಿಪ್ಪು ಹಾಗೂ ಫ್ರೆಂಚ್ ಸೈನ್ಯದ ಪಿತೂರಿಯಿಂದ ಸಾವಿರಾರು ಕೊಡವರನ್ನು ಹತ್ಯೆ ಮಾಡಿದ ಸ್ಥಳವಾದ ದೇವಟ್‍ಪರಂಬುವಿನಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದು ಜಿಲ್ಲೆಯಲ್ಲಿ ಅಶಾಂತಿಗೆ ಕಾರಣವಾಗಿಲ್ಲ. ಆ ಸ್ಮಾರಕವನ್ನು ಭಗ್ನಗೊಳಿಸಿದ ನಂತರ ಶಾಂತಿ ಹಾಗೂ ಸೌಹಾರ್ದತೆ ಕದಡುವ ಪ್ರಯತ್ನವಾಗಿದೆ. ಸ್ಮಾರಕ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸದಂತೆ ಪೊಲೀಸ್ ಇಲಾಖೆ ಮೇಲೆ ಜನಪ್ರತಿನಿಧಿಗಳು ಪ್ರಭಾವ ಬೀರುತ್ತಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಶಾಂತಿ ಸೌಹಾರ್ದತೆ ಕದಡಲು ಪ್ರಚೋದನೆ ನೀಡಿದವರನ್ನು ಬಂಧಿಸಬೇಕೆಂದು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಒತ್ತಾಯಿಸಿದ್ದಾರೆ.
ಶ್ರೀಮಂಗಲ ಗ್ರಾ. ಪಂ ಸಭಾಂಗಣದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಟ್ ಪರಂಬು ಸ್ಮಾರಕ ಭಗ್ನಗೊಳಿಸಿರುವ ಕೃತ್ಯ ಮಾನವ ಹಕ್ಕು ಉಲ್ಲಂಘನೆಯಾಗಿದೆ. ಸರ್ಕಾರ ಮತ್ತು ಕೊಡವರ ಮಧ್ಯೆ ಮಾತ್ರ ಸ್ಮಾರಕದ ಬಗ್ಗೆ ಚರ್ಚೆಯಾಗಬೇಕು. ಸ್ಮಾರಕವು ಯಾರದೇ ಕಂದಾಯ ಕಟ್ಟಿದ ಜಾಗದಲ್ಲಿ ನಿರ್ಮಾಣವಾಗಿಲ್ಲ. ಹಳೆಯ ಇತಿಹಾಸವನ್ನು ಕೆದಕಿ ಸ್ಮಾರಕ ನಿರ್ಮಿಸುವದು ಬೇಡವೆಂದಾದರೆ, ಸ್ವಾತಂತ್ರ್ಯ ಹೋರಾಟಗಾರರೋರ್ವರ ಸ್ಮಾರಕವನ್ನು ಮಡಿಕೇರಿಯಲ್ಲಿ ನಿರ್ಮಿಸಿದ್ದು ಹಾಗೂ ಕೋಟೆಯೊಳಗೆ ಅವರ ಹೆಸರಿನಲ್ಲಿ ಕಲ್ಲುನೆಟ್ಟಿದ್ದು ಇತಿಹಾಸವನ್ನು ಕೆದಕಿರುವದಲ್ಲವೇ ಎಂದು ಪ್ರಶ್ನಿಸಿದರು.
ಸಿ.ಎನ್.ಸಿ.ಯ ನೇತೃತ್ವದಲ್ಲಿ ದೇವಟ್‍ಪರಂಬುವಿನಲ್ಲಿ ಸ್ಮಾರಕ ನಿರ್ಮಿಸುವದರಿಂದ ಯಾವದೇ ಜನಾಂಗಕ್ಕೆ ತೊಂದರೆಯಾಗುವದಿಲ್ಲ. ಕೊಡವರ ಹತ್ಯಾಕಾಂಡ ನಡೆದ ಸ್ಥಳದಲ್ಲಿ ಸ್ಮಾರಕ ನಿರ್ಮಿಸದೆ ಮೈಸೂರು ಮಂಡ್ಯದಲ್ಲಿ ನಿರ್ಮಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.
ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರುನಾಚಪ್ಪ ಮಾತನಾಡಿ ತ¯ಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಈ ಮಾರ್ಗದಲ್ಲಿ ತೆರಳುವ ಸಂದರ್ಭ ದೇವಟ್ ಪರಂಬುವಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹತ್ಯಾಕಾಂಡವಾದ ಪೂರ್ವಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಅಲ್ಲಿ ಸುತ್ತ-ಮುತ್ತ ಹೂವು ಸಿಕ್ಕದೆ ಇರುವದರಿಂದ ಸೊಪ್ಪುಗಳನ್ನು ಹಾಕಿ ಕೊಡವರು ಪ್ರಾರ್ಥಿಸಿ ತೆರಳುತಿದ್ದರು. ಈಗಲೂ ಈ ಸಂಪ್ರದಾಯ ಹಿರಿಯರಿಂದ ಕಿರಿಯರಿಗೆ ತಿಳಿದು ನಡೆಸುತ್ತಾ ಬರುತ್ತಿದ್ದಾರೆ. ಈ ಹತ್ಯಾಕಾಂಡದಲ್ಲಿ ಇತರ ಜನಾಂಗದವರು ಸೇರಿದ್ಧಾರೆ ಎನ್ನುವದಕ್ಕೆ ಯಾವದೇ ಇತಿಹಾಸವಿಲ್ಲ ಎಂದು ಹೇಳಿದರು.
ಕೊಡವ ವಿರೋಧಿ ಮನಸ್ಥಿತಿಯ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆಂದು ಆರೋಪಿಸಿದರು. ಜನಪ್ರತಿನಿಧಿಗಳು ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸುವದನ್ನು ಬಿಟ್ಟು ಮೌನವಹಿಸುವದು ಸರಿಯಲ್ಲ. ಜನಪ್ರತಿನಿಧಿಗಳು ಒಂದು ಜಾತಿ, ಒಂದು ವರ್ಗಕ್ಕೆ ಸೀಮಿತವಾಗಬಾರದು. ಸ್ವಜಾತಿಗಗಾರದು ಎಂದು ಕಿಡಿಕಾರಿದರು.
ಚಟ್ರಂಡ ಎ.ರಘು ಮಾತನಾಡಿ, ದೇವಟ್‍ಪರಂಬು ಹತ್ಯಾಕಾಂಡದಲ್ಲಿ ಮಡಿದ ಕೊಡವರ ಪೂರ್ವಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಮಾರಕ ನಿರ್ಮಿಸಿದ್ದನ್ನು ಭಗ್ನಗೊಳಿಸಿ ಅದನ್ನು ವಿರೋಧಿಸುವ ಮನೋಸ್ಥಿತಿ ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆ ತಂದಿದೆ. ಕೊಡವರು ಇತರ ಜನಾಂಗದೊಂದಿಗೆ ಅನ್ಯೋನ್ಯತೆಯಲ್ಲಿದ್ದು ಈ ಸ್ಮಾರಕಕ್ಕೆ ಸಂಬಂಧ ಇಲ್ಲದವರು, ಮೂಗು ತೂರಿಸುವ ಅಗತ್ಯತೆ ಇಲ್ಲ. ಹತ್ಯಾಕಾಂಡದಿಂದ ಪೂರ್ವಿಕರನ್ನು ಕಳೆದುಕೊಂಡು ಇಂದು ಅತೀ ಸೂಕ್ಷ್ಮ ಅಲ್ಪಸಂಖ್ಯಾತರಾಗಿರುವ ಕೊಡವರಿಗೆ ಅದರ ನೋವು ಹಾಗೂ ಭಾವನೆ ಇದೆ. ಆದರೆ ಅದನ್ನು ವಿರೋಧಿಸುವ ಮನೋಭಾವ ಸರಿಯಾದುದ್ದಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಅಜ್ಜಮಾಡ ಜೀವನ್, ವಿಠಲಮುತ್ತಪ್ಪ, ಅಯ್ಯಮಾಡ ಉದಯ, ರವಿ, ಕಿರಣ್, ಬೊಟ್ಟಂಗಡ ಡಾಲಿ, ಮಾಣೀರ ಚಿಟ್ಟಿಯಪ್ಪ ಹಾಜರಿದ್ದರು.