ಅಡ್ಡಂಡ ಕಾರ್ಯಪ್ಪ ಆಗ್ರಹ
ವೀರಾಜಪೇಟೆ, ಮೇ 17: ದೇವಟ್ ಪರಂಬುನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು. ನೂರಾರು ಏಕರೆ ಜಾಗ ಒತ್ತುವರಿಯಾಗಿದ್ದು, ಜಿಲ್ಲಾಡಳಿತ ಕೂಡಲೇ ತೆರವುಗೊಳಿಸಬೇಕು ಎಂದು ಟಿಪ್ಪು ವೈಭವೀಕರಣ ವಿರೋಧಿ ಸಮಿತಿ ಸಂಚಾಲಕ ಅಡ್ಡಂಡ ಕಾರ್ಯಪ್ಪ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಟ್ ಪರಂಬುವಿನಲ್ಲಿ ವೀರ ಸ್ಮಾರಕ ಧ್ವಂಸ ಪ್ರಕರಣ ಕೊಡವ ವಿರೋಧಿ ಕಿಡಿಗೇಡಿಗಳ ಕೃತ್ಯವಾಗಿದೆ. ಮಾಜಿ ವಿಧಾನ ಪರಿಷತ್ ಸದಸ್ಯ ಎ.ಕೆ. ಸುಬ್ಬಯ್ಯ ಪತ್ರಿಕಾಗೋಷ್ಠಿ ನಡೆಸಿ ಎರಡು ದಿನದಲ್ಲಿ ಸ್ಮಾರಕ ಧ್ವಂಸ ಕೃತ್ಯ ನಡೆದಿದೆ. ಹಿಂದೂ-ಮುಸ್ಲಿಂರ ನಡುವೆ ಕೋಮುದಳ್ಳುರಿಯನ್ನು ನಡೆಸಲು ಇಂತಹ ಕೃತ್ಯಗಳನ್ನು ನಡೆಸಲಾಗಿದೆ.
ಸಿ.ಎನ್.ಸಿ. ಸ್ಥಾಪಿಸಿದ ಕಲ್ಲಿನ ಸ್ಮಾರಕ ತೆಗೆದು ಹಾಕಿದ ತಕ್ಷಣ ದೇವಟ್ ಪರಂಬುವಿನ ಇತಿಹಾಸ ಮಾಸುವದಿಲ್ಲ. ಇಡೀ ಜಾಗವೇ ಒಂದು ಸ್ಮಾರಕ. ಅಲ್ಲಿನ ಜಾಗ ನೂರಾರು ಏಕರೆ ಒತ್ತುವರಿಯಾಗಿರುವರಿಂದ ಸಿ.ಎನ್.ಸಿ. ಸ್ಮಾರಕ ಮಾಡಬೇಕು ಎನ್ನುವಾಗಲೇ ಭೂ ಕಬಳಿಕೆದಾರರು ವಿರೋಧ ವ್ಯಕ್ತಪಡಿಸಿದ್ದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎ.ಕೆ. ಸುಬ್ಬಯ್ಯ ಹಾಗೂ ಕೆಲವು ಕೊಡವ ವಿರೋಧಿಗಳು ತಮ್ಮ ಲಾಭಕ್ಕಾಗಿ ಅಲ್ಪಸಂಖ್ಯಾತ ಜನಾಂಗವನ್ನು ಎತ್ತಿಕಟ್ಟುತ್ತಿರುವದರ ವಿರುದ್ಧ ಅಖಿಲ ಕೊಡವ ಸಮಾಜ, ಫೆಡರೇಷನ್ ಆಫ್ ಕೊಡವ ಸಮಾಜ ಸೇರಿದಂತೆ ಎಲ್ಲಾ ಕೊಡವ ಸಮಾಜಗಳು ರಾಷ್ಟ್ರೀಯ ಸ್ಮಾರಕ ಮಾಡಲು ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಿ ಇದು ಕೊಡವರ ಆತ್ಮಸಾಕ್ಷಿಯ ಪ್ರಶ್ನೆಯಾಗಿದೆ ಎಂದು ಹೇಳಿದ ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಲ್ಲಿ ವಿವಾದಿತ ವ್ಯಕ್ತಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಹೇಳಿದರು.