ಸುಂಟಿಕೊಪ್ಪ, ಮೇ 17: ಗುಡುಗು-ಸಿಡಿಲಿನಿಂದ ಭಾರೀ ಮಳೆ-ಗಾಳಿ ಬಂದ ಪರಿಣಾಮ ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ಸುಂಟಿಕೊಪ್ಪ ಸುತ್ತಮುತ್ತ ನಡೆದಿದೆ.
ಇಲ್ಲಿಗೆ ಸಮೀಪದ ಗರಗಂದೂರು ಬಳಿ ವಾಸುದೇವ ಎಂಬವರ ಕೊಟ್ಟಿಗೆ ನೆಲಕಚ್ಚಿದೆ. ಪ್ರಮೋದ್ ಅವರ ನಿರ್ಮಾಣ ಹಂತದಲ್ಲಿದ್ದ ಮನೆ ಕುಸಿದು ಬಿದ್ದಿದೆ. ಹರದೂರಿನ ಬಾಬು ಎಂಬವರ ಮನೆಯ 20 ಶೀಟುಗಳು ಹಾಗೂ 100 ಕ್ಕೂ ಹೆಚ್ಚು ಹೆಂಚುಗಳು ಗಾಳಿಗೆ ಹಾರಿ ಒಡೆದು ಹೋಗಿದೆ. ಈ ಮನೆಯ ಸಮೀಪದ ಬಿ.ಟಿ. ರಮೇಶ್ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಗ್ರಾಮ ಲೆಕ್ಕಿಗ ನಾಗೇಶ್‍ರಾವ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಅಲ್ಲದೇ ಇಲ್ಲಿನ ಕೆಂಚಟ್ಟಿ ಮತ್ತು ಸ್ವಸ್ಥ ಶಾಲೆಯ ಬಳಿ ಭಾರೀ ಗಾತ್ರದ ಮರಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ಕೂಡಲೇ ಸ್ಥಳಕ್ಕಾಗಮಿಸಿದ ಚೆಸ್ಕಾಂ ಅಭಿಯಂತರ ಬಸವರಾಜು ಮತ್ತು ಸಿಬ್ಬಂದಿ ಹಾಗೂ ಪೊಲೀಸರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭ ಚೆಸ್ಕಾಂ ಅಭಿಯಂತರ ಬಸವರಾಜು ಮಾತನಾಡಿ, ಈಗಾಗಲೇ ಗಾಳಿ-ಮಳೆಗೆ ಸುಮಾರು 80 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿಸಿದರು.