ಶನಿವಾರಸಂತೆ, ಜು. 2: ಪಟ್ಟಣದ ಮಸೀದಿಗಳಲ್ಲಿ ಧ್ವನಿ ವರ್ಧಕದ ಮೂಲಕ ಕೇಳಿಸುವಂತೆ ತುಂಬಾ ಜೋರಾಗಿ ಬಾಂಗ್ ನೀಡುತ್ತಾರೆ. ಇದರಿಂದ ಸಾರ್ವಜನಿಕ ಶಾಂತಿಗೆ ಭಂಗವುಂಟಾಗುತ್ತದೆ ಎಂದು ಗ್ರಾ.ಪಂ. ಸದಸ್ಯ ಹೆಚ್.ಆರ್. ಹರೀಶ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಕೆಲ ಸದಸ್ಯರು ಇದಕ್ಕೆ ಧ್ವನಿಗೂಡಿಸಿದಾಗ, ಮುಸ್ಲಿಂ ಸಮುದಾಯಕ್ಕೆ ಉಪವಾಸದ ದಿನಗಳಾಗಿರುವದರಿಂದ ರಂಜಾನ್ ಹಬ್ಬದ ಬಳಿಕ ಮಸೀದಿಗಳಿಗೆ ಸೂಚನೆ ನೀಡುವದಾಗಿ ಅಧ್ಯಕ್ಷರು ಉತ್ತರಿಸಿದರು.
ತ್ಯಾಗರಾಜ ಕಾಲೋನಿಯಲ್ಲಿ ಜನಸಂಖ್ಯೆ ಅಧಿಕಗೊಳ್ಳುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಸದಸ್ಯ ಪಾಂಡು ಒತ್ತಾಯಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದಲ್ಲಿ ಸಮಸ್ಯೆ ತೀವ್ರವಾಗಿರುವ ಕಸ ವಿಲೇವಾರಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿಯಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
2012ರಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಪಟ್ಟಣದ 7 ಸ್ಥಳಗಳಲ್ಲಿ ಸೋಲಾರ್ ದೀಪ ಅಳವಡಿಸಲು ರೂ. 1.50 ಲಕ್ಷ ಮಂಜೂರಾಗಿದ್ದರೂ ಬ್ಯಾಟರಿ ಅಳವಡಿಸದೇ ವ್ಯರ್ಥವಾಗಿದೆ. ಹಿಂದಿನ ಮಾಸಿಕ ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿದರೂ ಕ್ರಮ ಕೈಗೊಳ್ಳದಿರುವ ಬಗ್ಗೆಯೂ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ತಾ.ಪಂ. ಸದಸ್ಯ ಅನಂತ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸೌಭಾಗ್ಯ ಲಕ್ಷ್ಮಿ, ಸರ್ದಾರ್, ರಜನಿ, ಹೇಮಾ, ಉಷಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಶಾಲಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.