ಭಾಗಮಂಡಲ, ಜೂ. 16: ಕಾವೇರಿ ಬಚಾವೋ ಆಂದೋಲನ ಹಿನ್ನೆಲೆಯಲ್ಲಿ ತಲಕಾವೇರಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯ ಎರಡನೇ ದಿನದಂದು ಅಯ್ಯಂಗೇರಿ ಮೂಲಕ ನಾಪೋಕ್ಲು ಕಡೆಗೆ ತೆರಳಿತು. ಸಣ್ಣಪುಲಿಕೋಟುವಿನ ಕುಯ್ಯಮುಡಿ ಐನ್‍ಮನೆಯಿಂದ ಬೆಳಿಗ್ಗೆ ಹೊರಟ ತಂಡವನ್ನು ಐನ್‍ಮನೆ ಕುಟುಂಬದ ಸದಸ್ಯರು ಹಾರ್ದಿಕವಾಗಿ ಬೀಳ್ಕೊಟ್ಟರು. ಅಯ್ಯಂಗೇರಿ ಮೂಲಕ ಸಾಗಿದ ಸಾಧುಸಂತರ ಮತ್ತು ಕಾರ್ಯಕರ್ತರ ತಂಡವನ್ನು ಅಯ್ಯಂಗೇರಿ ಬಳಿ ಮುಸಲ್ಮಾನ ಬಾಂಧವರು ಹಾರ್ದಿಕವಾಗಿ ಸ್ವಾಗತಿಸಿದರು. ಸ್ಥಳೀಯ ಪ್ರಮುಖರಾದ ಇಸ್ಮಾಯಿಲ್, ಅಬ್ದುಲ್ ರೆಹಮಾನ್ ಅವರುಗಳು ತಮ್ಮ ಮನೆಗೆ ತಂಡದ ಸದಸ್ಯರನ್ನು ಬರಮಾಡಿ ಕೊಂಡು ಉಪಚರಿಸಿದರು. ರಂಜಾನ್ ಹಬ್ಬದ ಸಂದರ್ಭ ಸಾಧುಸಂತರನ್ನು ಬರಮಾಡಿಕೊಂಡು ಉಪಚರಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಇಸ್ಮಾಯಿಲ್ ಹಾಗೂ ಅಬ್ದುಲ್ ರೆಹಮಾನ್, ಕಾವೇರಿ ನದಿ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಿದಲ್ಲಿ ಶುದ್ಧವಾದ ನೀರು ಹರಿಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸುವದರೊಂದಿಗೆ ಸಮುದಾಯದ ಪ್ರಮುಖರು ಪಾದಯಾತ್ರೆ ತಂಡಕ್ಕೆ ಶುಭ ಹಾರೈಸಿದರು.
ಬಲ್ಲಮಾವಟಿ ಬಳಿ ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಮತ್ತು ಸ್ಥಳೀಯ ಪ್ರಮುಖರು ತಂಡವನ್ನು ಹಾರ್ದಿಕವಾಗಿ ಬರಮಾಡಿಕೊಂಡು ನಾಪೋಕ್ಲು ಬಳಿಯ ಹಳೆ ತಾಲೂಕು ಭಗವತಿ ದೇವಾಲಯದಲ್ಲಿ ಪಾದಯಾತ್ರೆ ತಂಡಕ್ಕೆ ತಂಗಲು ವ್ಯವಸ್ಥೆ ಕಲ್ಪಿಸಿದರು. ವಿವಿಧ ಪಕ್ಷಗಳ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಪಾದಯಾತ್ರೆಗೆ ಶುಭ ಹಾರೈಸಿದರು.
ದಾರಿಯುದ್ದಕ್ಕೂ ವಿವಿಧ ಗ್ರಾಮಗಳ ಜನರೊಂದಿಗೆ ನದಿ ಬಗ್ಗೆ ಜಾಗೃತಿ ಮೂಡಿಸಿದ ತಂಡದ ಪ್ರಮುಖರಾದ ರಮಾನಂದ ಸ್ವಾಮೀಜಿ ಹಾಗೂ ಸಂಘಟಕರಾದ ಎಂ.ಎನ್. ಚಂದ್ರಮೋಹನ್ ಮತ್ತಿತರ ಸದಸ್ಯರು ನದಿಯ ಸಂರಕ್ಷಣೆಗೆ ಕೈಜೋಡಿಸುವಂತೆ ಜನತೆಯಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ನದಿ ತಟದ ಜನರಲ್ಲಿ ಹಲವೆಡೆ ಚರ್ಚೆ ನಡೆಸುವ ದರೊಂದಿಗೆ ನದಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ತಾ. 17 ರಂದು (ಇಂದು) ಬೆಳಿಗ್ಗೆ ಪಾದಯಾತ್ರೆ ತಂಡ ನಾಪೋಕ್ಲುವಿನಿಂದ ಬಲಮುರಿ ಮೂಲಕ ಕೊಂಡಂಗೇರಿಯತ್ತ ಸಾಗಲಿದೆ.