ಸೋಮವಾರಪೇಟೆ, ಮೇ 21: ನಿವೇಶನ ರಹಿತರಿಗೆ ಹಾಗೂ ಕಸ ವಿಲೇವಾರಿಗೆ ಮೀಸಲಿಟ್ಟ ಜಾಗವನ್ನು ಮುಳುಗಡೆ ಸಂತ್ರಸ್ತರಿಗೆ ವಿತರಿಸಲು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ತೆರೆಮರೆಯಲ್ಲಿ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿ ನಿಡ್ತ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಆ ವ್ಯಾಪ್ತಿಯ ಸಾರ್ವಜನಿಕರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿ, ತಹಶೀಲ್ದಾರರ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು.

ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯನಪುರ ಗ್ರಾಮದ ಸರ್ವೆ ನಂ. 124/1ರ 4 ಏಕರೆ ಜಮೀನನ್ನು ಹೇಮಾವತಿ ಹಿನ್ನೀರು ಮುಳುಗಡೆ ಸಂತ್ರಸ್ತರಿಗೆ ಕಾಯ್ದಿರಿಸಲು ಕಂದಾಯ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ. ಆದರೆ 1996ರಲ್ಲೇ ಜಿಲ್ಲಾಧಿಕಾರಿಗಳು ಆಶ್ರಯ ಯೋಜನೆಯಲ್ಲಿ ಆ ಜಾಗವನ್ನು ಬಡವರಿಗೆ ಹಂಚಲು ಆದೇಶ ನೀಡಿದ್ದಾರೆ ಎಂದು ನಿಡ್ತ ಗ್ರಾಪಂ ಅಧ್ಯಕ್ಷ ಕೆ.ಎಂ.ಮುಸ್ತ್ತಫಾ ಹೇಳಿದರು.

ಜಾಗವು ಸಾಗುವಳಿಗೆ ಯೋಗ್ಯವಾಗಿಲ್ಲ, ಪಟ್ಟಣಕ್ಕೆ ಹತ್ತಿರದ ಪ್ರದೇಶವಾಗಿದ್ದು, ರಾಜ್ಯ ಹೆದ್ದಾರಿ ಹಾದು ಹೋಗಿದೆ. ನವಗ್ರಾಮ ನಿರ್ಮಾಣಕ್ಕೆ ಯೋಗ್ಯವಾಗಿರುವ ದರಿಂದ ಹಾಗೂ ನಿಡ್ತ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ಅವಶ್ಯಕವಿರುವದರಿಂದ ಆ ಜಾಗವನ್ನು ಮುಳುಗಡೆ ಸಂತ್ರಸ್ತರಿಗೆ ಕಾಯ್ದಿರಿಸಿದೆ, ಜಾಗದ ಸರ್ವೆ, ಸ್ಕೆಚ್ ಮತ್ತು ಆರ್‍ಟಿಸಿಯನ್ನು ನಿಡ್ತ ಗ್ರಾಮ ಪಂಚಾಯಿತಿಗೆ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಕಂದಾಯ ಇಲಾಖೆ ಅಧಿಕಾರಿ ಗಳು ಯಾವದಾದರೂ ಒತ್ತಡಕ್ಕೆ ಮಣಿದು, ನಿಯಮಬಾಹಿರವಾಗಿ ಮುಳುಗಡೆ ಸಂತ್ರಸ್ಥರಿಗೆ ಜಾಗವನ್ನು ನೀಡಲು ಮುಂದಾದರೆ ಈ ವ್ಯಾಪ್ತಿಯ ಜನಪ್ರತಿನಿಧಿಗಳು, ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ತಮ್ಮ ಬೇಡಿಕೆಯ ಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವದು ಎಂದು ತಹಶೀಲ್ದಾರ್ ಎಸ್.ಎನ್. ನರಗುಂದ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯ ಲಾಯಿತು.

ನಿಡ್ತ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಾಳಮ್ಮ ಮತ್ತು ಸದಸ್ಯರುಗಳು, ಶನಿವಾರಸಂತೆ ತಾ.ಪಂ. ಸದಸ್ಯ ಅನಂತ್ ಕುಮಾರ್, ದಲಿತ ಸೇನೆಯ ಜಿಲ್ಲಾಧ್ಯಕ್ಷ ಟಿ.ಈ. ಸುರೇಶ್ ಮತ್ತಿತರರು ಪತ್ರಿಭಟನೆಯಲ್ಲಿದ್ದರು.