ಮಡಿಕೇರಿ, ಜೂ. 27: ಜಿಲ್ಲೆಯಲ್ಲಿರುವ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುವಂತೆ ಸಂಸದ ಪ್ರತಾಪ್ ಸಿಂಹ ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.ನಗರದ ಕಾರ್ಪೋರೇಷನ್ ಬ್ಯಾಂಕ್‍ನ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬ್ಯಾಂಕ್‍ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ರೈತರಿಗೆ, ಬೆಳೆಗಾರರಿಗೆ ಉದ್ಯಮಿಗಳಿಗೆ ಸಾಲ ಸೌಲಭ್ಯವನ್ನು ನಿಗದಿತ ಅವಧಿಯಲ್ಲಿ ಒದಗಿಸು ವಂತಾಗಬೇಕು. ಆರ್ಥಿಕ ವರ್ಷದ ಕೊನೆಯ ತನಕ ಕಾಯು ವಂತಾಗಬಾರದು. ಸಾಲ ಪಡೆದು ಪಾವತಿಸುವ ಪ್ರತಿಯೊಬ್ಬರಿಗೂ ಬ್ಯಾಂಕುಗಳ ಸೌಲಭ್ಯಗಳು ತಲುಪುವಂತೆ ಮಾಡಬೇಕು. ಸರ್ಕಾರ ಜಾರಿಗೊಳಿಸಿರುವ ಮುದ್ರಾ, ಜನ್‍ಧನ್, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ವಿಮಾ ಸೌಲಭ್ಯಗಳು ಹೀಗೆ ನಾನಾ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ಮುಂದಾಗಬೇಕು. ವಾರ್ಷಿಕವಾಗಿ ನೀಡಲಾಗಿರುವ ಗುರಿಯಂತೆ ಸಾಲ ಒದಗಿಸಬೇಕು. ರೈತರಲ್ಲಿ ಭಯ ಮೂಡಿಸುವ ರೀತಿಯಲ್ಲಿ ಕಾರ್ಯನಿರ್ವಹಿಸ ಬಾರದು ಎಂದು ಸಂಸದರು ಕಿವಿಮಾತು ಹೇಳಿದರು. ಬಹಳಷ್ಟು ಬ್ಯಾಂಕ್‍ಗಳಲ್ಲಿ ಸಾಲ ನೀಡುವ ಅವಧಿ ಪೂರ್ಣಗೊಂಡಿದೆ ಎಂದು ವಾಪಸ್ಸು ಕಳುಹಿಸುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತವೆ. ಇಂತಹ ದೂರುಗಳು ಕೇಳಿ ಬರದಂತೆ ಬ್ಯಾಂಕ್‍ಗಳ ವ್ಯವಸ್ಥಾಪಕರು ಗಮನಹರಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಜನರಿಗೆ ಉದ್ಯಮಶೀಲತೆ ಯಲ್ಲಿ ತೊಡಗಿಸಿಕೊಳ್ಳುವಂತಾಗಲು ಸಾಲವನ್ನು ನೀಡಬೇಕು. ನಿರೀಕ್ಷಿತ ಮಟ್ಟದಲ್ಲಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸಬೇಕು ಎಂದು ಸಂಸದರು ಸಲಹೆ ಮಾಡಿದರು. ದೀರುಬಾಯಿ ಅಂಬಾನಿ ಅವರಿಗೆ ಸಿಂಡಿಕೇಟ್ ಬ್ಯಾಂಕ್ ಹೇಗೆ ಸಾಲ ಸೌಲಭ್ಯ ನೀಡಿ ಖಾಸಗಿ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿಸಲು ಪ್ರಯತ್ನಿಸಿತು. ಅದೇ ರೀತಿ ಬ್ಯಾಂಕುಗಳ ಅಧಿಕಾರಿಗಳು ಗ್ರಾಮೀಣ ಬಡ ಜನರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಅವಕಾಶ ಮಾಡಬೇಕು. ಜಿಲ್ಲೆಯ ಯಾವ ಗ್ರಾಮ ಪಂಚಾಯಿತಿಯಲ್ಲಿ ಬ್ಯಾಂಕ್ ಇಲ್ಲ, ಅಲ್ಲಿ ಬ್ಯಾಂಕ್ ಆರಂಭಿಸುವಂತಾಗಬೇಕು. ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾರ್ಮಿಕರಿಗೆ ಸೌಲಭ್ಯಗಳನ್ನು ತಲುಪಿಸಲು ಅರಿವು ಮೂಡಿಸಬೇಕು. ಬೆಳೆ ಸಾಲ, ಅಲ್ಪಾವಧಿ ಸಾಲ ಯೋಜನೆಗಳನ್ನು ತಲುಪಿಸುವಂತಾಗಬೇಕು. ಎಲ್ಲಾ ಬ್ಯಾಂಕ್‍ಗಳಲ್ಲಿ ಎಟಿಎಂ ಸೌಲಭ್ಯ ಇರಬೇಕು ಎಂದು ಅವರು ಹೇಳಿದರು.ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ ಸರ್ಕಾರ ಬ್ಯಾಂಕ್‍ಗಳ ಮೂಲಕ ಹಲವು ಸಾಲ ಸೌಲಭ್ಯ ಒದಗಿಸುತ್ತಿದೆ. ಅದರಂತೆ ವಾರ್ಷಿಕ ಗುರಿಯಂತೆ ಶೀಘ್ರದಲ್ಲಿಯೇ ರೈತರಿಗೆ ತಲುಪಿಸುವಂತಾಗಬೇಕು. ಸರ್ಕಾರ ಜಾರಿಗೊಳಿಸಿರುವ ಅಪಘಾತ ವಿಮೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕಿದೆ. ವಿಮಾ ಯೋಜನೆಯನ್ನು ಪರಿಣಾಮಕಾರಿ ಯಾಗಿ ತಲುಪಿಸಬೇಕಿದೆ ಎಂದು ಹೇಳಿದರು. ರಿಸರ್ವ್ ಬ್ಯಾಂಕ್‍ನ ಉಪ ಮಹಾ ಪ್ರಬಂಧಕ ಎಂ. ರಂಗಸ್ವಾಮಿ ಮಾತನಾಡಿ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕ್‍ಗಳ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅಟಲ್ ಪೆನ್ಶನ್ ಯೋಜನೆ, ಕೃಷಿಕರಿಗೆ ಸಾಲ ಸೌಲಭ್ಯ, ರಾಷ್ಟ್ರೀಯ ವಿಮಾ ಯೋಜನೆ, ಮುದ್ರಾ ಯೋಜನೆ, ಜನಧನ್ ಯೋಜನೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ಇನ್ನಷ್ಟು ಕ್ರಿಯಾಶೀಲವಾಗಬೇಕಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗಿರೀಶ್ ಅವರು ಹವಾಮಾನ ಆಧಾರಿತ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂನ್, 30 ಕೊನೆ ದಿನವಾಗಿದೆ. ಹಾಗೆಯೇ ಪ್ರಧಾನಮಂತ್ರಿ ಫಸಲು ಭಿಮಾ ಯೋಜನೆಗೆ ಜುಲೈ, 30 ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದರು. ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ. ನಾಣಯ್ಯ ಮಾತನಾಡಿ ಕೃಷಿ ಸಾಲ ಒದಗಿಸುವ ಬಗ್ಗೆ ಹಲವು ಮಾಹಿತಿ ನೀಡಿದರು. ರಿಸರ್ವ್ ಬ್ಯಾಂಕ್‍ನ ಸಹಾಯಕ ಮಹಾ ಪ್ರಬಂಧಕ ಗೋಪಿನಾಥ್ ಅವರು ವಿವಿಧ ಬ್ಯಾಂಕ್‍ಗಳ ಪ್ರಗತಿ, ಗುರಿ ಸಾಧನೆ ಸಂಬಂಧ ಮಾಹಿತಿ ಪಡೆದರು. ಕಾರ್ಪೊರೇಷನ್ ಬ್ಯಾಂಕ್ ತರಬೇತಿ ಸಂಸ್ಥೆಯ ನಿರ್ದೇಶಕ ನಾಗೇಂದ್ರ ಅವರು ಕೂಡಿಗೆಯ ಕಾರ್ಪೊರೇಷನ್ ಬ್ಯಾಂಕ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಹಮ್ಮಿಕೊಳ್ಳುತ್ತಿರುವ ಬಗ್ಗೆ ಹಲವು ಮಾಹಿತಿ ನೀಡಿದರು. ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು 2015-16ರಲ್ಲಿ ಸಾಧಿಸಿರುವ ಪ್ರಗತಿ ಸಂಬಂಧ ಹಲವು ಮಾಹಿತಿ ನೀಡಿದರು. ನಾನಾ ಇಲಾಖೆ ಅಧಿಕಾರಿಗಳು ಇದ್ದರು.