ಸೋಮವಾರಪೇಟೆ, ಜೂ. 8: ಸರ್ಕಾರಿ ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಳೆದ 30 ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಂ. ಮಹಮ್ಮದ್ ಆರೋಪಿಸಿದರು.
ಇಲ್ಲಿನ ನಿವೃತ್ತ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿವೃತ್ತ ನೌಕರರಿಗೆ ತಿಂಗಳಿಗೆ 1 ಸಾವಿರ ರೂ. ಆರೋಗ್ಯ ಭತ್ಯೆ ನೀಡಬೇಕು. ನಿವೃತ್ತ ನೌಕರರು ಮೃತಪಟ್ಟಾಗ ಕುಟುಂಬಕ್ಕೆ 25 ಸಾವಿರ ಸಹಾಯ ಧನ ನೀಡಬೇಕು. ಬಸ್ ಪ್ರಯಾಣದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಬೇಕೆಂಬ ಬೇಡಿಕೆ ಇದುವರೆಗೆ ಈಡೇರಿಲ್ಲ ಎಂದು ಹೇಳಿದರು. ರಾಜ್ಯದಲ್ಲಿರುವ ಕೆಲ ಐಎಎಸ್ ಅಧಿಕಾರಿಗಳು ನಿವೃತ್ತ ನೌಕರರ ಬೇಡಿಕೆಗಳು ಈಡೇರುವದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಇದರಿಂದ ನೌಕರರು ಸಂಕಷ್ಟದಲ್ಲೇ ಬದುಕು ವಂತಾಗಿದೆ. ಐಎಎಸ್ ಅಧಿಕಾರಿಗಳಿಗೆ ಮಾತ್ರ ಎರಡೂವರೆ ಲಕ್ಷ ರೂ. ಸಂಬಳ, ಪರಿಚಾರಕರ ಭತ್ಯೆ 7 ಸಾವಿರ, ದೂರವಾಣಿಗಾಗಿ 5 ಸಾವಿರ ಮತ್ತು ಕುಟುಂಬದ ಸದಸ್ಯರಿಗೆ ವೈದ್ಯಕೀಯ ವೆಚ್ಚ ದೊರೆಯುತ್ತದೆ. ಆದರೆ ನಿವೃತ್ತ ಸರ್ಕಾರಿ ನೌಕರರ ಕನಿಷ್ಟ ಬೇಡಿಕೆಯನ್ನು ಈಡೇರಿಕೆಗೆ ಅಡ್ಡಗಾಲು ಹಾಕುತ್ತಿದ್ದಾರೆಂದು ದೂರಿದರು.
ರಾಜ್ಯ ಸರ್ಕಾರದ ಸಂಜೀವಿನಿ ಭಾಗ್ಯ ಘೋಷಣೆಯಾಗಿ ಒಂದು ವರ್ಷ ಕಳೆದರೂ ಇದುವರೆಗೆ ಯೋಜನೆಯ ಸವಲತ್ತುಗಳು ನಿವೃತ್ತ ನೌಕರರಿಗೆ ಸಿಗುತ್ತಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾ.ಪಂ. ಸದಸ್ಯೆ ಎಚ್.ಎನ್.ತಂಗಮ್ಮ, ಬಿ.ಎಂ. ಮಾದಯ್ಯ, ಎಂ.ಪಿ. ನಾರಾಯಣ ಮೂರ್ತಿ, ಕೆ.ಎನ್. ಪೊನ್ನಪ್ಪ, ಕೆ.ಪಿ. ದೇವಕಿ, ಸುಮಂಗಲ ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ, ಸಂಪಾಜೆ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ. ಶಂಕರ ನಾರಾಯಣ ಭಟ್, ನಿವೃತ್ತ ಎಸ್.ಪಿ. ಶಿವಮೂರ್ತಿ, ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಸಿ. ರಾಜಶೇಖರ್, ಸಂಘದ ಪದಾಧಿಕಾರಿಗಳಾದ ದಾಮೋಧರ್, ಡಿ.ವಿ. ಸೋಮಪ್ಪ, ಬೋಮ್ಮಯ್ಯ, ಗುಂಡೇಗೌಡ ಮತ್ತಿತರರು ಉಪಸ್ಥಿತರಿದ್ದರು.