ಮಡಿಕೇರಿ, ಜೂ. 17: ಹಟ್ಟಿಹೊಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸುಮಾರು 36 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ವಯೋನಿವೃತ್ತಿಯನ್ನು ಹೊಂದಿದ ಐ.ಕೆ. ಚೋಂದಕ್ಕಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಗೌರವಿಸಿ, ಶುಭ ಹಾರೈಸಿದರು.

ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ., ಅಕ್ಷರ ದಾಸೋಹ, ಅಂಗನವಾಡಿ ಕಾರ್ಯಕರ್ತೆಯರು, ಅಂಚೆ ಸಿಬ್ಬಂದಿ ಹಾಗೂ ಊರಿನವರು ಎಲ್ಲರೂ ಸೇರಿ ಚಿನ್ನದ ಉಂಗುರವನ್ನು ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಿದರು.

ಇದೇ ಸಂದರ್ಭ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಅಂಗನವಾಡಿ ಸಹಕಾರಿ ಬಿ.ಜಿ. ರುಕ್ಮಿಣಿ ಇವರ ಸಮಾಜ ಸೇವೆಯನ್ನು ಮೆಚ್ಚಿ ಪೂವತಿ, ಶುಭ, ಫೌಜಿಯಾ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜನಕ ಕೆ. ಮೂರ್ತಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಯೋಗೇಶ್, ಮಾದಾಪುರ ಶಾಲೆಯ ಮುಖ್ಯ ಶಿಕ್ಷಕ ಪುಟ್ಟಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯ್, ನಿವೃತ್ತ ಶಿಕ್ಷಕ ಇಂದಿರಾವತಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ನಿರ್ಮಲ ವಿದ್ಯಾಭವನ ಸಂಸ್ಥೆಯ ರೆವರೆಂಡ್ ಫಾದರ್ ಚಾಲ್ರ್ಸ್ ಜೋಸೆಫ್ ಸಮಾಜದಲ್ಲಿ ಶಿಕ್ಷಕರ ಹುದ್ದೆಯು ಅತ್ಯಂತ ಪವಿತ್ರವಾದದ್ದು, ಸಮಾಜದಲ್ಲಿ ಸದಾ ಗೌರವಿಸಲ್ಪಡುವ ವೃತ್ತಿ ಇದು.

ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಬೆಳೆದು ಆದರ್ಶ ಪ್ರಾಯರಾಗಬೇಕು ಎಂದು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಹೆಚ್.ಎಂ. ಕನ್ನಿಕೆ ಸ್ವಾಗತಿಸಿ, ನಿವೃತ್ತ ಶಿಕ್ಷಕಿ ದುಲ್ಸಿನ್ ಡೇಸಾ ವಂದಿಸಿದರು. ಶಿಕ್ಷಕಿ ಶಾಂತಲೀಲಾ ನಿರೂಪಿಸಿದರು.