ಸಿದ್ದಾಪುರ, ಜೂ. 7: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಹಾಲುಗುಂದ ಗ್ರಾಮದಲ್ಲಿ ನಡೆದಿದೆ.

ಹಾಲುಗುಂದ ಗ್ರಾಮದ ಪಂದಿಕಂಡ ಬೋಪಣ್ಣ ಎಂಬವರ ತೋಟದ ಲೈನ್‍ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಕಾರ್ಮಿಕ ಪಣಿ ಎರವರ ಬೊಳ್ಳಿ (60) ಎಂಬಾತ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ತನ್ನ ಪತ್ನಿ ಗೌರು (55)ಳೊಂದಿಗೆ ವಿನಾಕಾರಣ ಕಲಹ ನಡೆಸಿ ದೊಣ್ಣೆಯಿಂದ ಹಲ್ಲೆ ಮಾಡಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಗೌರು ಇಂದು ಬೆಳಿಗ್ಗೆ ಮೃತಪಟ್ಟಿರುವದಾಗಿ ಅಳಿಯ ಪೊನ್ನಪ್ಪ ಬೊಳ್ಳಿಯ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಕೊಲೆ ಆರೋಪಿ ಕಾರ್ಮಿಕ ಬೊಳ್ಳಿಯನ್ನು ಸಿದ್ದಾಪುರ ಪೊಲೀಸರು ಬಂದಿಸಿದ್ದಾರೆ. ಮೃತ ಗೌರು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ಸ್ಥಳಕ್ಕೆ ಮಡಿಕೇರಿ ವೃತ್ತ ನಿರೀಕ್ಷಕ ಮೇದಪ್ಪ ಭೇಟಿ ನೀಡಿದ್ದು, ಸಿದ್ದಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಗೌರುವಿನ ಮರಣೋತ್ತರ ಪರೀಕ್ಷೆಯನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಿ ಮೃತ ದೇಹವನ್ನು ವಾರೀಸುದಾರರಿಗೆ ಹಸ್ತಾಂತರಿ ಸಲಾಯಿತು.

-ಎ.ಎನ್. ವಾಸು