ಮಡಿಕೇರಿ, ಜೂ. 27: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರಥಮ ಬಾರಿಗೆ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಆಗಸ್ಟ್ 19 ರಂದು ಮಡಿಕೇರಿಯಲ್ಲಿ ಆಯೋಜಿಸಲು ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸ ಲಾಗಿದೆ. ವಿಶ್ವ ವಿಖ್ಯಾತ ಛಾಯಾ ಗ್ರಾಹಕ ಜೋಡಿ ಕೃಪಾಕರ ಸೇನಾನಿ, ಖ್ಯಾತ ಸುದ್ದಿ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.
ವಿಶೇಷ ಸ್ಪರ್ಧೆ
ಪತ್ರಕರ್ತರ ಸಂಘದ ಸದಸ್ಯರಾಗಿರುವ ಮುದ್ರಣ ಮತ್ತು ದೃಶ್ಯ ಮಾಧ್ಯಮ ಛಾಯಾಗ್ರಾಹಕರಿಗೆ ಪ್ರತ್ಯೇಕ ವಿಭಾಗದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಪ್ರಯುಕ್ತ ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ. ‘ಕೊಡಗಿನ ಮುಂಗಾರು ಮಳೆ' ವಿಷಯದಡಿ ಈ ಸ್ಪರ್ಧೆ ನಡೆಯಲಿದೆ. ಮುಂಗಾರು ಮಳೆಗಾಲದ ಜನಜೀವನ, ಕೃಷಿ ಚಟುವಟಿಕೆ, ಜಲಪಾತಗಳ ವೈಭವ, ಪ್ರಕೃತಿ ವೈಭವ ಸೇರಿದಂತೆ ಮಳೆಯ ಹಿನ್ನೆಲೆಯಲ್ಲಿ ವಿವಿಧ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಛಾಯಾಚಿತ್ರ ಹಾಗೂ ದೃಶ್ಯಾವಳಿ ಸರೆಹಿಡಿಯಬೇಕಾಗಿದೆ.
ಛಾಯಾಗ್ರಾಹಕರು ತಾ. 28 ರಿಂದ ಜುಲೈ 15 ರೊಳಗೆ ತೆಗೆದ ಚಿತ್ರ ಹಾಗೂ ಸೆರೆಹಿಡಿದ ದೃಶ್ಯವನ್ನು ಜುಲೈ 17 ರೊಳಗೆ ಸಲ್ಲಿಸಬೇಕು.
ಛಾಯಾಗ್ರಾಹಕರು ತಾವು ತೆಗೆದ ಚಿತ್ರಗಳ ಪೈಕಿ ಅತ್ಯುತ್ತಮವಾದ ಮೂರು ಚಿತ್ರವನ್ನು ಎ/4 ಅಳತೆಯಲ್ಲಿ ನೀಡಬೇಕು. ದೃಶ್ಯವಾಹಿನಿ ಕ್ಯಾಮರಾ ಮ್ಯಾನ್‍ಗಳು ತಾವು ಸೆರೆಹಿಡಿದ 2 ನಿಮಿಷದ ದೃಶ್ಯವನ್ನು ಸಲ್ಲಿಸಬೇಕು. ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಛಾಯಾಚಿತ್ರ ಹಾಗೂ ದೃಶ್ಯಾವಳಿಗಳ ಪ್ರದರ್ಶನ ನಡೆಯಲಿದೆ. ಕೃಪಾಕರ ಸೇನಾನಿ ಜೋಡಿ ಅತ್ಯುತ್ತಮವಾದ ಚಿತ್ರ ಹಾಗೂ ದೃಶ್ಯ ಆಯ್ಕೆ ಮಾಡಲಿದ್ದಾರೆ. ಅತ್ಯುತ್ತಮವಾದ ಛಾಯಾಚಿತ್ರ ತೆಗೆದ ಸದಸ್ಯನಿಗೆ ಬೆಸ್ಟ್ ಫೋಟೋಗ್ರಾಫರ್ ಹಾಗೂ ಅತ್ಯುತ್ತಮವಾದ ದೃಶ್ಯಾವಳಿ ತೆಗೆದ ಸದಸ್ಯನಿಗೆ ಬೆಸ್ಟ್ ವಿಡಿಯೋ ಗ್ರಾಫರ್ ಬಹುಮಾನ ನೀಡಲಾಗುತ್ತದೆ.
ವಿಶೇಷ ಸ್ಪರ್ಧೆಯಲ್ಲಿ ಪಾಲ್ಗೊಳ್ಳು ವವರು ತಾ. 30 ರೊಳಗೆ ಕಾರ್ಯ ಕ್ರಮದ ಸಂಚಾಲಕ ಅಜ್ಜಮಾಡ ರಮೇಶ್ ಕುಟ್ಟಪ್ಪ (8884432052) ಅವರಲ್ಲಿ ಹೆಸರು ನೋಂದಾಯಿಸಿ ಕೊಳ್ಳಬೇಕು.