ಸುಂಟಿಕೊಪ್ಪ, ಜೂ. 24 : 7ನೇ ಮೈಲು ಬಳಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಪಾದಚಾರಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿದ್ದು, ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋರ್ವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ನೇ ಮೈಲು ಬಳಿಯಲ್ಲಿ ಸಂಜೆ 3.45 ರ ಸಂದರ್ಭ ಮೈಸೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸಾರಿಗೆ ರಾಜಹಂಸ (ಕೆಎ.19 ಎಫ್2945) ಬಸ್ನ ಮಧ್ಯ ಭಾಗದಲ್ಲಿ ಅಳವಡಿಸಲಾಗಿರುವ ಲಗೇಜು ತುಂಬಿಸುವ ಸ್ಥಳದ ಬಾಗಿಲು ಪಾದಚಾರಿಗಳಿಗೆ ಬಡಿದು ಶಿವ (32) ಎಂಬಾತ ಹೆದ್ದಾರಿ ಬದಿಯ ಚರಂಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ದಿನಗೂಲಿ ನೌಕರ ರಾಜು (38) ಎಂಬವರು ತೀವ್ರ ಗಾಯಗೊಂಡಿದ್ದು, ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ವಾಹನ ಪರಾರಿ: ಈರ್ವರಿಗೆ ಅಪಘಾತಗೊಳಿಸಿ ಓರ್ವನ ಸಾವಿಗೆ ಕಾರಣವಾಗಿ ನಿಲ್ಲಿಸದೆ ತೆರಳಿದ ರಾಜಹಂಸ ಸಾರಿಗೆ ಬಸ್ಸನ್ನು ಸಮೀಪವೇ ಇದ್ದ ಗ್ರಾಮದ ಯುವಕರುಗಳಾದ ಪ್ರಕಾಶ, ಕುಟ್ಟಪ್ಪ್ಪ, ಶಶಿ,ಮಣಿ,ಗಣೇಶ್, ಹ್ಯಾರಿಸ್, ವಿಜಯ, ಕೂಡಲೆ ಜೀಪ್ ಒಂದರಲ್ಲಿ ಬೆನ್ನಟ್ಟಿ ಮಡಿಕೇರಿಯಲ್ಲಿ ಬಸ್ಸನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆಟೋಚಾಲಕ ಸಂಘದ ಅಧ್ಯಕ್ಷ ಸಂತೋಷ್ (ದಿನು) ಗಾಯಳುವನ್ನು ಸಹವರ್ತಿ ಪ್ರಶಾಂತ್ ಆಟೋದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು. ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಠಾಣೆ ಎ.ಎಸ್.ಐ.ಪಾರ್ಥ, ಮುಖ್ಯ ಪೇದೆ ಈರಪ್ಪ ಹಾಗೂ ಸಿಬ್ಬಂದಿಗಳು ಮಹಜರು ನಡೆಸಿ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡರು.