ಕುಶಾಲನಗರ, ಜೂ. 23: ಸೋಮವಾರಪೇಟೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಕರ್ತವ್ಯ ನಿರತರಾಗಿದ್ದ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಆಗ್ರಹಿಸಿದ್ದಾರೆ.

ಸೋಮವಾರಪೇಟೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಅಮಾಯಕ ಚೇತನ್ ಎಂಬಾತನ ಮೇಲೆ ಸಂಘ ಪರಿವಾರದ ಕೆಲವರು ಹಲ್ಲೆಗೆ ಮುಂದಾದಾಗ ಬಂದೋಬಸ್ತ್ ವಹಿಸಿದ್ದ ಸುಂಟಿಕೊಪ್ಪ ಠಾಣಾಧಿಕಾರಿ ತಡೆಯಲು ಯತ್ನಿಸಿದ ಸಂದರ್ಭ ಅವರನ್ನು ನೆಲಕ್ಕೆ ದೂಡಿ ಹಲ್ಲೆಗೆ ಯತ್ನಿಸಿ ಅವರ ವಿರುದ್ಧ ಧಿಕ್ಕಾರ ಕೂಗಿರುವ ಕ್ರಮ ಸಂವಿಧಾನ ವಿರುದ್ಧ ಚಟುವಟಿಕೆಯಾಗಿದೆ. ಈ ಮೂಲಕ ಬಿಜೆಪಿ ಹಾಗೂ ಸಂಘ ಪರಿವಾರದವರು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಇದನ್ನು ಐಎನ್‍ಟಿಯುಸಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಕೂಡ ಬಂದ್ ಹಾಗೂ ಪ್ರತಿಭಟನೆ ನಡೆಸುವ ಮೂಲಕ ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸುತ್ತಿರುವದು ಖಂಡನೀಯ ವಿಚಾರವಾಗಿದೆ.

ಪ್ರತಿಭಟನೆಗಳ ಮೂಲಕ ಪೊಲೀಸರ ಮೇಲೆ ನಿರಂತರವಾಗಿ ಒತ್ತಡ ಹೇರುವದರೊಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವದು, ಸರಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ತಡೆಯೊಡ್ಡುವ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಜಿಲ್ಲೆಯ ಇಬ್ಬರು ಶಾಸಕರು ಗಮನಹರಿಸಬೇಕಿದೆ ಎಂದರು. ಬಿಜೆಪಿಯವರು ಒತ್ತಡ ತಂತ್ರಗಳನ್ನು ದೂರವಿಡುವ ಮೂಲಕ ಪೊಲೀಸರೊಂದಿಗೆ ಸಹಕರಿಸಬೇಕಿದೆ. ಕೂಡಲೆ ಜಿಲ್ಲೆಯ ಶಾಸಕರು ಬಿಜೆಪಿ ಹಾಗೂ ಸಂಘ ಪರಿವಾರದವರಿಗೆ ತಿಳುವಳಿಕೆ ಹೇಳುವದು ಸೂಕ್ತ ಎಂದರು.

ವೈಯಕ್ತಿಕ ವಿಚಾರವಾಗಿ ಯುವಕರೀರ್ವರ ನಡುವೆ ನಡೆದ ಘಟನೆಗೆ ಕೋಮು ಬಣ್ಣ ಬಳಿಯುವ ಮೂಲಕ ಬಂದ್‍ಗೆ ಕರೆ ನೀಡಿ ಪ್ರತಿಭಟಿಸುವ ಮನೋಭಾವ ಕೂಡಲೇ ನಿಲ್ಲಿಸಬೇಕಿದೆ. ಇಲ್ಲದಿದ್ದಲ್ಲಿ ಮುಂದೆ ಯಾವದೇ ರೀತಿಯ ಅನಾಹುತಗಳು ಸಂಭವಿಸಿದಲ್ಲಿ ಅದಕ್ಕೆ ಬಿಜೆಪಿ ಹಾಗೂ ಸಂಘಪರಿವಾರದವರೇ ನೇರ ಹೊಣೆಗಾರರಾಗಲಿದ್ದಾರೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಐಎನ್‍ಟಿಯುಸಿ ಕೊಡಗು ಜಿಲ್ಲಾ ಅಧ್ಯಕ್ಷ ಟಿ.ಪಿ.ಹಮೀದ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಿ.ಎಸ್.ಚಂದ್ರಶೇಖರ್ ಇದ್ದರು.

* ನಿಷ್ಠಾವಂತ ದಕ್ಷ ಪೊಲೀಸ್ ಅಧಿಕಾರಿ ಮೇಲೆ ಸೋಮವಾರಪೇಟೆಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಪಿ.ಶಿವಕುಮಾರ್ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೋಮವಾರಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಡೆದ ಪ್ರತಿಭಟನಾ ರ್ಯಾಲಿಯ ಬಂದೋಬಸ್ತ್ ವಹಿಸಿದ್ದ ಸುಂಟಿಕೊಪ್ಪ ಠಾಣಾಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿರುವದು ಖಂಡನೀಯ ವಿಚಾರವಾಗಿದೆ. ಗಲಭೆ ಸಂದರ್ಭ ಪ್ರತಿಭಟನಾಕಾರರ ತಳ್ಳಾಟದಲ್ಲಿ ನೆಲಕ್ಕುರುಳಿದ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ತಮ್ಮ ಆತ್ಮರಕ್ಷಣೆಗಾಗಿ ಸರ್ವೀಸ್ ರಿವಾಲ್ವರ್ ಹೊರತೆಗೆದಿದ್ದಾರೆ ಹೊರತು ಯಾವದೇ ದುರುದ್ದೇಶದಿಂದಲ್ಲ. ಠಾಣಾಧಿಕಾರಿ ಮೇಲೆ ಹಲ್ಲೆಗೆ ಮುಂದಾದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವದರೊಂದಿಗೆ ಇಂತಹ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚರವಹಿಸಬೇಕಿದೆ ಎಂದು ಹೆಚ್.ಪಿ.ಶಿವಕುಮಾರ್ ಆಗ್ರಹಿಸಿದ್ದಾರೆ.