ಮಡಿಕೇರಿ, ಜೂ.23: ಜಿಲ್ಲಾಡಳಿತದ ಅನುಮತಿ ಪಡೆಯದೆ ತಾವೇ ಕಾನೂನನ್ನು ಕೈಗೆತ್ತಿಕೊಂಡು ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿ ಕೆಲವರು ಕೋಮು ಪ್ರಚೋದನೆಯ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ.ರಮೇಶ್ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಸೋಮವಾರಪೇಟೆ ಜನತಾ ಕಾಲೋನಿಯ ಅನ್ಯ ಕೋಮಿನ ಇಬ್ಬರು ಯುವಕರ ನಡುವೆ ಕಲಹ ಏರ್ಪಟ್ಟು ಹಲ್ಲೆ ನಡೆದಿದೆ. ಹಲ್ಲೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿರುವದಾಗಿ ತಿಳಿಸಿದ್ದು, ಮತ್ತೊಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೂ ಪೊಲೀಸರಿಂದ ಯಾವದೇ ಅನುಮತಿ ಪಡೆಯದೆ ಸಂಘ ಪರಿವಾರದವರು ನಡೆಸಿರುವ ಪ್ರತಿಭಟನೆ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆದಾಗ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಪ್ರತಿಭಟನೆಯ ಸಂದರ್ಭದಲ್ಲಿ ಸಂಘ ಪರಿವಾರದವರು ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡಲು ಮುಂದಾಗಿರುವದು ಖಂಡನೀಯವೆಂದು ಟಿ.ಪಿ ರಮೇಶ್ ಹೇಳಿದ್ದಾರೆ.

ಸಂಘ ಪರಿವಾರ ನಡೆಸಿದ ಕಾನೂನು ಬಾಹಿರ ಪ್ರತಿಭಟನೆಯ ನಂತರ ರಾತ್ರಿ ಐಗೂರು ಮತ್ತು ಹೊಸತೋಟಗಳ ಬಳಿ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟ ನಡೆಸಿದವರನ್ನು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕು. ತಪ್ಪಿತಸ್ಥರು ಯಾರೇ ಇರಲಿ, ಯಾವದೇ ಕೋಮಿನವರಾಗಿರಲಿ ಅವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಮಾಯಕÀರನ್ನು ಬಂಧಿಸುವದು ಮತ್ತು ಅಮಾಯಕರ ವಿರುದ್ಧ ಮೊಕದ್ದಮೆ ಹೂಡುವ ಕ್ರಮವನ್ನು ಪೊಲೀಸರು ಕೈಬಿಡಬೇಕೆಂದು ಹೇಳಿದ್ದಾರೆ.