ಕೂಡಿಗೆ, ಜೂ. 19: ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ಸರ್ಕಾರಿ ಕ್ರೀಡಾ ಪ್ರೌಢಶಾಲೆಯ ಆವರಣದಲ್ಲಿ ಅಂದಾಜು ರೂ. 4 ಕೋಟಿ ವೆಚ್ಚದ ಹಾಕಿ ಟರ್ಫ್ ಕಾಮಗಾರಿ ಭರದಿಂದ ಸಾಗುತ್ತಿದೆ. ಟರ್ಫ್ ಮೈದಾನ ಕೂಡಿಗೆ ಕ್ರೀಡಾ ಶಾಲೆಯ ಬಹುದಿನಗಳ ಬೇಡಿಕೆಯಾಗಿತ್ತು. ಕ್ರೀಡಾ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಮಣ್ಣಿನ ನೆಲದ ಹಾಕಿ ಮೈದಾನದಲ್ಲಿ ಅಭ್ಯಾಸಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶಾಲಾ ವಿಭಾಗ, ಗ್ರಾಮಾಂತರ ಕ್ರೀಡಾಕೂಟ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವದು ಪ್ರಮುಖವಾಗಿದೆ.
ಈಗಾಗಲೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕೂಡಿಗೆಯ ಕ್ರೀಡಾಶಾಲೆಯ ಆವರಣಕ್ಕೆ ಹಾಕಿ ಟರ್ಫ್ ಅಳವಡಿಕೆಯ ಟೆಂಡರ್ ಪ್ರಕ್ರಿಯೆ ಮುಗಿದು ಜಾಗ ಗುರುತಿಸಿ, ಟರ್ಫ್ ಅಳವಡಿಕೆಗೆ ಸ್ಥಳದ ಸಿದ್ಧತೆ ಹಾಗೂ ಟರ್ಫ್ಗೆ ಹಾಕಲು ಬೇಕಾಗುವ ಸಾಮಗ್ರಿಗಳು ಈಗಾಗಲೇ ಸ್ಥಳಕ್ಕೆ ಬಂದಿದೆ. ಗುತ್ತಿಗೆ ಪಡೆದ ಬೆಂಗಳೂರಿನ ಗುತ್ತಿಗೆದಾರರು ಕಾಮಗಾರಿಯನ್ನು ಕೈಗೊಂಡು ಶಾಲೆಯ ಹಾಕಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 2 ತಿಂಗಳೊಳಗೆ ಕಾಮಗಾರಿಯನ್ನು ಮುಗಿಸುವದಾಗಿ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.