ಮಡಿಕೇರಿ, ಜೂ. 20: ಪುಷ್ಪಗಿರಿ ಎನ್ವರ್ನಮೆಂಟ್ ಅಂಡ್ ಪೀಪಲ್ ಡೆವಲಪ್ಮೆಂಟ್ ಸೊಸೈಟಿ ಮತ್ತು ಚೆಂಬು ಕೂಡಡ್ಕ ಸರಕಾರಿ ಪ್ರೌಢಶಾಲೆಯ ಜಂಟಿ ಸಹಯೋಗದೊಂದಿಗೆ ‘ಭೂಮಿ ಮತ್ತು ಪರಿಸರ ಭವಿಷ್ಯತ್ತಿನ ಸವಾಲುಗಳು’ ಎಂಬ ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಚೆಂಬು ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಚಿಂತಕರು ಹಾಗೂ ಪರಿಸರ ತಜ್ಞ ಬಂಟಮಲೆ ಟ್ರಸ್ಟನ್ ಡಾ. ಎ.ಕೆ. ಹಿಮಕರ್ ಅವರು ವಿದ್ಯಾರ್ಥಿಗಳಿಗೆ ಪರಿಸರದ ಉಳಿವು ಮತ್ತು ಅಳಿವಿನ ಕುರಿತಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಪಾಜೆಯ ಉದ್ಯಮಿ ಸೂರಜ್ ಹೊಸೂರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾ ಯಿನಿ ದೇಜಮ್ಮ ಕಟ್ಟೆಮನೆ ವಹಿಸಿ, ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಿ.ಎಂ. ಪೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೌಢಶಾಲೆಯ ಎಸ್ಡಿಎಂಸಿ ಸದಸ್ಯರಾದ ಗೋಪಾಲ ಹೊಸೂರು, ಚಂದ್ರಶೇಖರ ಹೊಸೂರು ಮತ್ತು ಶಿಕ್ಷಕರು ಹಾಗೂ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಯಸ್ವಿನಿ ಇಕೋ ಕ್ಲಬ್ ವಿದ್ಯಾರ್ಥಿನಿಯರು ಪರಿಸರ ಗೀತೆಯನ್ನು ಹಾಡಿದರು.