ಮಡಿಕೇರಿ, ಜೂ. 25: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಭೆ ಕಸಾಪ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ದೇ. ಜವರೇಗೌಡ ಸ್ಮರಣಾರ್ಥ ಜು.8ರಂದು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸ ಲಾಯಿತು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ. ದೇಜಗೌ ಅವರ ಜೀವನ, ಬರಹ, ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡಿಸುವಂತೆ ಸಭೆ ತೀರ್ಮಾನ ಕೈಗೊಂಡಿತು.
ತಾಲೂಕು ಘಟಕ ವತಿಯಿಂದ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸದಸ್ಯರು ಸಲಹೆ ನೀಡಿದರು. ಕಸಾಪ ಕಾರ್ಯಕ್ರಮಗಳು ಕೇವಲ ಪಟ್ಟಣ ಪ್ರದೇಶಕ್ಕೆ ಸೀಮಿತವಾಗ ಬಾರದು. ಗ್ರಾಮೀಣ ಪ್ರದೇಶದಲ್ಲಿ ಕನ್ನಡಪರ ಕಾರ್ಯಕ್ರಮ ಆಯೋಜಿಸಬೇಕು. ಕಾರ್ಯ ಕ್ರಮಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡಬೇಕು. ಮುಂಗಾರು ಅವಧಿಯಲ್ಲಿ ರೈತರ ಜೀವನ ಪದ್ಧತಿ ಸಂಬಂಧ ಗದ್ದೆ, ಕೃಷಿ ಚಟುವಟಿಕೆ ವೀಕ್ಷಿಸಿ ಕವನ ರಚನೆ ಕಾರ್ಯಕ್ರಮ ಹಮ್ಮಿಕೊಳ್ಳುವದು ಔಚಿತ್ಯಪೂರ್ಣ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕುಡೆಕಲ್ ಸಂತೋಷ್ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಆ ಮೂಲಕ ಆಂಗ್ಲ ಭಾಷೆಯನ್ನೇ ನೆಚ್ಚಿಕೊಂಡಿರುವ ವಿದ್ಯಾರ್ಥಿಗಳಿಗೆ ಕನ್ನಡದ ಕುರಿತು ತಿಳಿವಳಿಕೆ ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕನ್ನಡ ಕಾರ್ಯಕ್ರಮ ನವೆಂಬರ್ ತಿಂಗಳಲ್ಲಿ ಮಾತ್ರ ಹಮ್ಮಿಕೊಳ್ಳುವದಲ್ಲ. ವರ್ಷ ಪೂರ್ತಿ ಕಾರ್ಯಕ್ರಮ ನಡೆಯಬೇಕು. ತಾಲೂಕು ಘಟಕ ವತಿಯಿಂದ ತಿಂಗಳಿಗೆ ಒಂದಾದರು ಕಾರ್ಯಕ್ರಮ ಆಯೋಜಿಸಬೇಕು. ವಿನೂತನ ಮಾದರಿಯ ಆಯೋಜನೆಗೆ ಆದ್ಯತೆ ನೀಡಬೇಕೆಂದು ಸಲಹೆ ಮಾಡಿದರು.
ಹೋಬಳಿ ಹಾಗೂ ತಾಲೂಕು ಘಟಕ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಜಿಲ್ಲಾ ಘಟಕದಿಂದ ಅಗತ್ಯ ಸಹಕಾರ ನೀಡುತ್ತೇವೆ. ಶೀಘ್ರದಲ್ಲಿ ಯುವ ಸಾಹಿತಿ, ಬರಹಗಾರರ ಕಮ್ಮಟ ಹಾಗೂ ವಿವಿಧ ಅಕಾಡೆಮಿಗಳ ಸಹಕಾರದಲ್ಲಿ ‘ಮುಂಗಾರು ಸಂಪದ’ ಕಾರ್ಯಕ್ರಮ ಆಯೋಜಿಸುವ ಚಿಂತನೆಯಿದೆ. ಆ ಮೂಲಕ ನಶಿಸುತ್ತಿರುವ ಜಾನಪದ ಕಲೆಗಳ ಪ್ರೋತ್ಸಾಹಿಸಿ, ಪೋಷಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ಕೆ.ಸಿ. ದಯಾನಂದ್, ಮಾಧ್ಯಮ ಕಾರ್ಯದರ್ಶಿ ಕಿಶೋರ್ ರೈ ಕತ್ತಲೆಕಾಡು, ಸದಸ್ಯರಾದ ಬಿ.ಬಿ. ಸರಸ್ವತಿ, ವೀಣಾಕ್ಷಿ ರವಿಕುಮಾರ್, ಕೆ.ಟಿ. ಕೃಪಾ, ಬಾಳೆಯಡ ಕಿಶನ್ ಪೂವಯ್ಯ, ಕೆ.ಬಿ. ರವಿ, ಪ್ರಶಾಂತ್, ಕಿಗ್ಗಾಲು ಜಿ. ಹರೀಶ್ ಇದ್ದರು.