ಸೋಮವರಪೇಟೆ, ಜೂ. 30: ಮದ್ಯ ಮುಕ್ತ ಸಮಾಜದಿಂದ ದೇಶಕ್ಕೆ ಉಜ್ವಲ ಭವಿಷ್ಯ ಎಂದು ಪ್ರತಿಪಾದಿಸಿದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕರ್ನಾಟಕ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಆಗ್ರಹಿಸಲಾಗುವದು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಆಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ವಲಯ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಜೇಸಿಐ ಸೋಮವಾರಪೇಟೆ ಪುಷ್ಪಗಿರಿ, ರೋಟರಿ ಹಿಲ್ಸ್, ಹಿಂದೂ ಜಾಗರಣಾ ವೇದಿಕೆ, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಿವೃತ್ತ ಸರಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ನವಜೀವನ ಸಮಿತಿ ಮತ್ತು ದಾನಿಗಳ ಸಹಕಾರದೊಂದಿಗೆ 8 ದಿನಗಳ ಕಾಲ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ 945ನೇ ಮದ್ಯವರ್ಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯ ಕುಡಿತದ ಚಟಕ್ಕೆ ಬಲಿಯಾದರೆ ಆತನನ್ನು ಇಡೀ ಸಮಾಜವೇ ಕೇವಲವಾಗಿ ಕಾಣುತ್ತದೆ ಮಾತ್ರವಲ್ಲ, ತನ್ನ ಕುಟುಂಬದ ವಿಶ್ವಾಸದಿಂದಲೂ ದೂರವಾಗುತ್ತಾನೆ. ಒಬ್ಬ ವ್ಯಕ್ತಿ ಮದ್ಯವನ್ನು ವರ್ಜಿಸಿ, ಮತ್ತೆ ಸಮಾಜ ಮುಖಿಯಾಗಿ ಮುನ್ನಡೆದರೆ, ಸಮಾಜ ಕೊಡುವ ಗೌರವ ಅಪಾರವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ವರೂ ಸನ್ಮಾರ್ಗದಲ್ಲಿ ಸಾಗು ವಂತಾಗಬೇಕೆಂದು ರಂಜನ್ ಆಶಿಸಿದರಲ್ಲದೆ, ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಸರ್ಕಾರವನ್ನು ಆಗ್ರಹಿಸಲಾಗುವದು ಎಂದರು.
ಶಿಬಿರಾಧಿಕಾರಿ ಧರ್ಮಸ್ಥಳದ ಗಣೇಶ್ ಆಚಾರ್ಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಕರ್ನಾಟಕ ರಾಜ್ಯದ 27 ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಾ ಇದೀಗ ಕೇರಳದ ಕಾಸರಗೋಡು ಜಿಲ್ಲೆಗೂ ತನ್ನ ಸೇವೆಯನ್ನು ವೃದ್ಧಿಸಿದೆ. ಯೋಜನೆ ಮೂಲಕ ನಡೆಸಿದ 944 ಮದ್ಯವರ್ಜನಾ ಶಿಬಿರದ ಮೂಲಕ ಸುಮಾರು 72 ಸಾವಿರ ಮಂದಿಯನ್ನು ಕುಡಿತದ ಚಟದಿಂದ ಬಿಡಿಸುವ ಮೂಲಕ ನವಜೀವನದ ಹೊಸ್ತಿಲಿಗೆ ತಲುಪಿಸಿದ ಕೀರ್ತಿ ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ್ ಕೆ.ಜೆ. ವಹಿಸಿದ್ದರು. ವೇದಿಕೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಸೀತಾರಾಂ ಶೆಟ್ಟಿ, ಯೋಜನಾಧಿಕಾರಿ ವೈ. ಪ್ರಕಾಶ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಪ.ಪಂ. ಸದಸ್ಯೆ ಲೀಲಾ ನಿರ್ವಾಣಿ, ಜೇಸೀ ಅಧ್ಯಕ್ಷ ಮಂಜುನಾಥ್, ರೋಟರಿ ಅಧ್ಯಕ್ಷ ಭರತ್ ಭೀಮಯ್ಯ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
8 ದಿನಗಳ ಕಾಲ ನಡೆದ ಶಿಬಿರದಲ್ಲಿ 50 ಮಂದಿ ಭಾಗವಹಿಸಿದ್ದು, ಪ್ರತಿ ದಿನ ಯೋಗಾಭ್ಯಾಸ, ವಿವಿಧ ತರಬೇತಿಗಳು, ಗಣ್ಯರಿಂದ ಮಾಹಿತಿ, ಡ್ಯಾನ್ಸ್ ವಾರಿಯರ್ಸ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ, ವಿವಿಧ ತಂಡಗಳಿಂದ ಭಜನೆ ಸೇರಿದಂತೆ ಇನ್ನಿತರ ರಚನಾತ್ಮಕ ಚಟುವಟಿಕೆಗಳನ್ನು ಆಯೋಜಿಸ ಲಾಗಿತ್ತು. ಶಿಬಿರದ ಕೊನೆ ದಿನ ದುಶ್ಚಟಗಳ ಚಟ್ಟ, ಚಿತೆ ರಚಿಸಿ ಅದಕ್ಕೆ ಬೆಂಕಿ ಹಚ್ಚುವ ಮೂಲಕ ತಮ್ಮೊಳಗಿದ್ದ ಮದ್ಯಪಾನದ ಚಟವನ್ನು ಸುಟ್ಟುಹಾಕಿ ಹೊಸ ಜೀವನಕ್ಕೆ ಕಾಲಿಟ್ಟರು.
ಈ ಹಿಂದಿನ ಶಿಬಿರಗಳಲ್ಲಿ ಭಾಗವಹಿಸಿ ಕುಡಿತದ ಚಟದಿಂದ ಹೊರಬಂದು ಸಮಾಜದಲ್ಲಿ ನೆಮ್ಮದಿ ಹಾಗೂ ಗೌರವದಿಂದ ಜೀವನ ನಡೆಸುತ್ತಿರುವ ನವಜೀವನ ಸಮಿತಿಯ ಸದಸ್ಯರು, ಯೋಜನೆಯ ಶಿಬಿರಾಧಿಕಾರಿ ಗಣೇಶ್ ಆಚಾರ್ಯ, ಮೇಲ್ವಿಚಾರಕರುಗಳಾದ ನಾಗರಾಜ್, ರಾಜೇಶ್, ಸೇವಾಪ್ರತಿನಿಧಿ ರುಬೀನಾ ಸೇರಿದಂತೆ ವಿವಿಧ ಕಾರ್ಯಕ್ಷೇತ್ರಗಳ ಸೇವಾಪ್ರತಿನಿಧಿಗಳು, ಸಮಿತಿ ಸದಸ್ಯರು, ಸಂಘಸಂಸ್ಥೆಗಳ ಸಹಕಾರದೊಂದಿಗೆ 945ನೇ ಮದ್ಯವರ್ಜನ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿತು.