ಸೋಮವಾರಪೇಟೆ, ಮೇ 18: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತಕ್ಕೆ ತೆರಳಲು ರೂ. 3 ಕೋಟಿಗೂ ಅಧಿಕ ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆ ಲೋಕೋಪ ಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಕಳಪೆ ಗುಣಮಟ್ಟದ ಮರಳನ್ನು ಕಾಮಗಾರಿಗೆ ಬಳಸುತ್ತಿರುವದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ರಸ್ತೆಯನ್ನು ಕಾಂಕ್ರಿಟೀಕರಣ ಗೊಳಿಸಲು ಸರ್ಕಾರ ರೂ. 3.25 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಲೋಕೋಪಯೋಗಿ ಇಲಾಖೆಯ ಮೂಲಕ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದೀಗ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕೆ ಬಳಸಲಾಗುತ್ತಿರುವ ಮರಳಿನಲ್ಲಿ ಮಣ್ಣಿನ ಪ್ರಮಾಣವೇ ಅಧಿಕವಿದ್ದು, ಕಾಮಗಾರಿ ಕಳಪೆಯಾಗುತ್ತಿದೆ ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ, ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಕುಮಾರ್ ಅವರು ಇಲಾಖೆಗೆ ದೂರು ನೀಡಿದ್ದರು.

ಅದರಂತೆ ಇಂದು ಸ್ಥಳಕ್ಕೆ ಭೇಟಿ ನೀಡಿದ ಅಭಿಯಂತರ ಪುರುಷೋತ್ತಮ್ ಅವರು ಮರಳಿನ ಗುಣಮಟ್ಟವನ್ನು ಪರಿಶೀಲಿಸಿದರಲ್ಲದೆ, ಮೇಲ್ನೋಟಕ್ಕೆ ಗುಣಮಟ್ಟ ರಹಿತ ಮರಳು ಬಳಸುತ್ತಿರುವದು ಕಂಡುಬಂದ ಹಿನ್ನೆಲೆ ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸು ವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಸೈಟ್ ಇಂಜಿನಿಯರ್ ರಘು ಅವರುಗಳಿಗೆ ಸೂಚಿಸಿದರು.

ಕಾಮಗಾರಿಯ ಸ್ಥಳದಲ್ಲಿರುವ ಮರಳನ್ನು ತಕ್ಷಣ ತೆಗೆಯಬೇಕು. ಗುಣಮಟ್ಟದ ಮರಳನ್ನು ತಂದು ಕಾಮಗಾರಿ ಪ್ರಾರಂಭಿಸಬೇಕು. ಅಂಜಲಿ ಟ್ರೇಡ್ ಮಾರ್ಕ್‍ನ ಸಿಮೆಂಟ್ ಬಳಸುತ್ತಿದ್ದು, ಈ ಕಂಪೆನಿಯ ಐಎಸ್‍ಓ ಪ್ರಮಾಣ ಪತ್ರವನ್ನು ಕಚೇರಿಗೆ ಸಲ್ಲಿಸಬೇಕು. ಕಳಪೆ ಗುಣಮಟ್ಟದ ಮರಳನ್ನು ಸಾಗಿಸುವ ವೀಡಿಯೋ ಚಿತ್ರೀಕರಣ ಸಲ್ಲಿಸಬೇಕು. ಕಾಮಗಾರಿ ನಡೆಯುವ ಸಮಯದಲ್ಲಿ ದಿನದಲ್ಲಿ ಕನಿಷ್ಟ ಮೂರು ಬಾರಿಯಾದರೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕೆಂದು ಅಭಿಯಂತರರಿಗೆ ಸೂಚಿಸಿದರು.

ಈ ಸಂದರ್ಭ ಸ್ಥಳದಲ್ಲಿದ್ದ ಬಗ್ಗನ ಅನಿಲ್, ಬಗ್ಗನ ಹರೀಶ್, ಶಾಂತಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತ್ರಿಶೂಲ್ ಅವರುಗಳು ಮಾತನಾಡಿ, ಈ ವ್ಯಾಪ್ತಿಯಲ್ಲಿ ವಾರ್ಷಿಕ 300 ಇಂಚಿಗೂ ಅಧಿಕ ಮಳೆಯಾಗುತ್ತಿದ್ದು, ಕಳಪೆ ಕಾಮಗಾರಿ ನಿರ್ವಹಿಸಿದರೆ ಕಾಮಗಾರಿ ಪೂರ್ಣಗೊಂಡ ಒಂದೇ ವರ್ಷದಲ್ಲಿ ಹಣ ಪೋಲಾಗುತ್ತದೆ. ಗುಣಮಟ್ಟದ ಮರಳು ಉಪಯೋಗಿ ಸುವ ಬದಲು ಸ್ಥಳೀಯವಾಗಿ ಹೊಳೆ, ತೊರೆಗಳಲ್ಲಿ ಸಿಗುವ ಮಣ್ಣು ಮಿಶ್ರಿತ ಮರಳನ್ನು ಬಳಸಲಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸ ಲಾಗುವದು ಎಂದು ಎಚ್ಚರಿಸಿದರು.

ತಾನು ಸೋಮವಾರ ಮತ್ತೊಮ್ಮೆ ಸ್ಥಳ ಪರಿಶೀಲಿಸಲಿದ್ದು ಗುಣಮಟ್ಟದ ಕಾಮಗಾರಿಗೆ ಸೂಚಿಸಿದ್ದೇನೆ. ಸಂಬಂಧಿಸಿದ ಅಭಿಯಂತರರಿಗೆ ಸ್ಥಳದಲ್ಲಿರಲು ನಿರ್ದೇಶನ ನೀಡಿದ್ದು, ಕಾಮಗಾರಿಯಲ್ಲಿ ಸಂಶಯ ಬಂದರೆ ತನ್ನ ಗಮನಕ್ಕೆ ತರುವಂತೆ ಅಭಿಯಂತರ ಪುರುಷೋತ್ತಮ್ ತಿಳಿಸಿದರು. ಉತ್ತಮ ಗುಣಮಟ್ಟದ ಮರಳು ಬಳಸಬೇಕು. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳು ವದಾಗಿ ಗುತ್ತಿಗೆದಾರರಿಗೆ ಎಚ್ಚರಿಸಿದರು.