ಮೂರ್ನಾಡು, ಮೇ 21: ಮಳೆಯಿಂದ ರಸ್ತೆ ಬದಿಯಲ್ಲಿ ಉರುಳಿ ಬಿದ್ದ ಮರಗಳನ್ನು ತೆರವು ಗೊಳಿಸುವಂತೆ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಸಾಧಿಕ್ ಒತ್ತಾಯಿಸಿದ್ದಾರೆ.

ಕಳೆದ ಶನಿವಾರ ದಿನ ಸುರಿದ ಗಾಳಿ-ಮಳೆಗೆ ಮುತ್ತಾರುಮುಡಿ ಬಳಿ ತೋಟಗಳಿಂದ ಅನೇಕ ಮರಗಳು ರಸ್ತೆ ಬದಿಗೆ ಉರುಳಿ ಬಿದ್ದಿವೆ. ರಸ್ತೆಯುದ್ದಕ್ಕೂ ಅನೇಕ ಕಡೆಗಳಲ್ಲಿ ಮರಗಳು ಬಿದ್ದಿದ್ದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ರಸ್ತೆ ತಿರುವುಗಳಲ್ಲಿ ಬರುವ ವಾಹನಗಳಿಗೆ ಗೋಚರಿಸದೆ ವಾಹನ ಚಾಲಕರು ಪರದಾಡುವಂತಾಗಿದೆ. ರಸ್ತೆ ಬದಿಯಲ್ಲಿ ಎರಡೂ ಬದಿಗಳಲ್ಲಿ ಮರಗಳು ಬಿದ್ದುಕೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು ಅಪಘಾತಗಳಿಗೆ ಎಡೆಮಾಡಿಕೊಟ್ಟಿದೆ.

ಶುಕ್ರವಾರ ರಾತ್ರಿ ವೇಳೆ ಬೈಕ್ ಚಾಲಕರೊಬ್ಬರು ಬಿದ್ದ ಮರಕ್ಕೆ ಡಿಕ್ಕಿ ಹೊಡೆದು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರಗಳು ಉರುಳಿ ಬಿದ್ದು ವಾರಗಳೇ ಕಳೆದರೂ ಇದುವರೆಗೆ ತೆರವುಗೊಂಡಿಲ್ಲ. ಸಂಬಂಧ ಪಟ್ಟವರು ರಸ್ತೆ ಬದಿಗಳಲ್ಲಿ ಬಿದ್ದ ಮರಗಳನ್ನು ತೆರವು ಗೊಳಿಸುವಂತೆ ಒತ್ತಾಯಿಸಿದ್ದಾರೆ.