ಸುಂಟಿಕೊಪ್ಪ, ಜೂ. 26: ಅಕ್ರಮ-ಸಕ್ರಮದಡಿ ಮನೆಗೆ ಪಟ್ಟೆ ಸಿಗುತ್ತಿಲ್ಲ. ಗ್ರಾಮದಲ್ಲೇ ಜಲ ಮೂಲ ಹರಿಯುತ್ತಿದ್ದರೂ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ಮನೆ ತಡೆಗೋಡೆ ಬಿಲ್ ಪಾವತಿಯಲ್ಲಿ ಗೋಲ್ ಮಾಲ್ ಆಗಿದೆ, ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಿ, ಮಾದಾಪುರದಲ್ಲಿ ನಾಡು ಕಚೇರಿ ಸ್ಥಾಪಿಸಿ ಎಂದು ಮಾದಾಪುರ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಹಕ್ಕೊತ್ತಾಯ ಮಂಡಿಸಿದರು.

ಮಾದಾಪುರ ಗ್ರಾಮ ಪಂಚಾಯಿತಿ ಗ್ರಾಮಸಭೆ ಯಡಿಯೂರಪ್ಪ ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಎನ್. ಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮಸ್ಥರು ಕುಡಿಯುವ ನೀರು ಯೋಜನೆ ಕಳೆದ ವರ್ಷದ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದರೂ ಇನ್ನೂ ಜನರಿಗೆ ಲಭಿಸಿಲ್ಲ. ಕೋಳಿ, ಕುರಿ ತ್ಯಾಜ್ಯ ಹಾಗೂ ಕಾಫಿ ಪಲ್ಪರ್ ನೀರು ಟ್ಯಾಂಕಿಗೆ ಸೇರುತ್ತಿದೆ. ಕುಡಿಯುವ ನೀರು ಯೋಗ್ಯವಾಗಿಲ್ಲ ಎಂದು ಕಳೆದ ಗ್ರಾಮ ಸಭೆಯಲ್ಲೇ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು. ಇಂಜಿನಿಯರ್ ವೀರೇಂದ್ರ ಅವರು ಪ್ರತಿಕ್ರಿಯಿಸಿ, ಈ ಜಲವನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಜಲವು ಕುಡಿಯಲು ಯೋಗ್ಯವಾಗಿದೆ ಎಂಬ ವರದಿಯು ಲಭಿಸಿದೆ ತಿಳಿಸುತ್ತಿದ್ದಂತೆ ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮಾದಾಪುರ ಹೃದಯ ಭಾಗದಲ್ಲಿರುವ ಕುಡಿಯುವ ನೀರಿನ ಉಳಿದ ಕಾಮಗಾರಿ ಪೂರ್ಣಗೊಳಿಸಿ 10 ದಿನದೊಳಗೆ ಶುದ್ಧೀಕರಿಸಿದ ನೀರನ್ನು ಜನರಿಗೆ ಒದಗಿಸಿಕೊಡಬೇಕು ಇಲ್ಲದಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವದಾಗಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಅಭಿಯಂತರರಿಗೆ ಸೂಚಿಸಿದರು.

ದಿನದಿಂದ ದಿನಕ್ಕೆ ಮಾದಾಪುರ ಗ್ರಾಮ ಬೆಳೆಯುತ್ತಿದ್ದು, ಈ ಗ್ರಾಮ ಹೋಬಳಿ ಕೇಂದ್ರವಾಗಿ ಮಾರ್ಪಾಡುಗೊಳ್ಳುತ್ತಿದೆ. ಈ ಗ್ರಾಮಕ್ಕೆ ಹೊಂದಿಕೊಂಡಂತೆ ಸೂರ್ಲಬ್ಬಿ, ಮಂಕ್ಯ, ಗರ್ವಾಲೆ, ಕಾಂಡನಕೊಲ್ಲಿ, ಹಾಲೇರಿ, ಹಟ್ಟಿಹೊಳೆ, ಕುಂಬೂರು, ಹೊಸತೋಟ, ಗರಗಂದೂರು ಹರದೂರು ಈ ಗ್ರಾಮಗಳು ಮಾದಾಪುರ ಕೇಂದ್ರವನ್ನೇ ಅವಲಂಭಿಸಿವೆ. ಇಲ್ಲಿನ ಕಂದಾಯ ಇಲಾಖೆಯ ಯಾವದೇ ಕೆಲಸ-ಕಾರ್ಯ, ಸವಲತ್ತು ಪಡೆಯಲು ಸುಂಟಿಕೊಪ್ಪ ಕಂದಾಯ ಕಚೇರಿಗೆ ತೆರಳಬೇಕಾಗಿದೆ ಆದ್ದರಿಂದ ಜನರ ಅನೂಕೂಲಕ್ಕಾಗಿ ಮಾದಾಪುರದಲ್ಲೇ ನಾಡ ಕಚೇರಿಯನ್ನು ಸ್ಥಾಪಿಸಬೇಕೆಂದು ಗ್ರಾಮಸ್ಥ ಮಂದೆಯಂಡ ಗಣೇಶ್ ಆಗ್ರಹಿಸಿದರು. ಇದಕ್ಕೆ ಗ್ರಾಮಸ್ಥರೆಲ್ಲರೂ ದನಿಗೂಡಿಸಿದರು. ಸರಕಾರಕ್ಕೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು.

ಅಕ್ರಮ-ಸಕ್ರಮ 94 ಸಿ ಯಡಿ ಅರ್ಜಿ ಸಲ್ಲಿಸಿದ್ದವರಿಗೆ ಮನೆಯ ಹಕ್ಕು ಪತ್ರ ವಿತರಿಸುವಲ್ಲಿ ಕಂದಾಯ ಇಲಾಖೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಯಿತು. ಕಂದಾಯ ಗ್ರಾಮಲೆಕ್ಕಿಗರಾದ ಪರಮೇಶ್ ಉತ್ತರಿಸಿ 4 ಗ್ರಾಮಗಳ ಹೊರೆ ತನಗೆ ಸೇರಿದೆ ಈಗಾಗಲೇ 268 ಅರ್ಜಿ ಬಂದಿದೆ. ಪ್ರಥಮವಾಗಿ ಸರ್ವೆ ನಡೆಸಿ 26 ಮಂದಿಯ ಅರ್ಜಿ ವಿಲೇವಾರಿ ಪ್ರಗತಿಯಲ್ಲಿದೆ ಸರಕಾರದ ಮಾನದಂಡ ಪ್ರಕಾರ ಮಾಡಿಕೊಡಲಾಗುವದೆಂದರು.

ಕಾಂಡನಕೊಲ್ಲಿ ವಿಭಾಗಕ್ಕೆ ವಿದ್ಯುತ್ ಆಗಾಗ್ಗೆ ಕೈ ಕೊಡುತ್ತಿದೆ. ಚೆಸ್ಕಾಂ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮರುವಂಡ ಸತ್ಯ ಕಾರ್ಯಪ್ಪ ಹಾಗೂ ಮುಂಡಂಡ ರಘು ಆರೋಪಿಸಿದರು.

ಹಟ್ಟಿ ಹೊಳೆಯಲ್ಲಿ ಮೋರಿ ನಿರ್ಮಾಣ ಕಾಮಗಾರಿಗೆ 1 ಕೆಲಸಕ್ಕೆ 2 ಬಾರಿ ಬಿಲ್ ಪಾವತಿಸಲಾಗಿದೆ ಎಂದು ಪ್ರಕಾಶ್ ಆರೋಪಿಸಿದರು. ಕುಂಬೂರು ಗ್ರಾಮದಲ್ಲಿ ತೋಟದ ಮಧ್ಯದಲ್ಲಿರುವ 1 ಮನೆಗೆ ತಡೆಗೋಡೆ ನಿರ್ಮಿಸಿದ್ದು ಕಾಮಗಾರಿ ಕಳಪೆಯಾಗಿದೆ ಬಿಲ್ ತಡೆ ಹಿಡಿಯಲು ಹೇಳಿದರೂ ಪಂಚಾಯಿತಿಯವರು ಬಿಲ್ ಪಾವತಿ ಮಾಡಿದ್ದಾರೆ. ಈ ಕಾಮಗಾರಿ ಬಗ್ಗೆ ತನಿಖೆಯಾU Àಬೇಕೆಂದು ಗ್ರಾ.ಪಂ. ಸದಸ್ಯ ಪ್ರಸನ್ನ, ಸೋಮಪ್ಪ ಆಗ್ರಹಿಸಿದರು. ಈ ಬಗ್ಗೆ ತನಿಖೆಗೆ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಸಹಮತ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ಯಾಮ್, ಉಪಾಧ್ಯಕ್ಷೆ ಭಾರತಿ, ಗ್ರಾ.ಪಂ. ಸದಸ್ಯರುಗಳಾದ ಮಜೀದ್, ಇಬ್ರಾಹಿಂ, ಸೀದಿ, ಸೋಮಪ್ಪ, ಪ್ರಸನ್ನ, ಕೆ.ಎ. ಲತೀಫ್, ಸುಶೀಲ, ಭಾಗೀರಥಿ, ನೋಡಲ್ ಅಧಿಕಾರಿ ಪಶು ಸಂಗೋಪನಾ ಇಲಾಖೆ ವೈದ್ಯಾಧಿಕಾರಿ ಡಾ. ದಿವ್ಯಾ, ಕೃಷಿ ಅಧಿಕಾರಿ ಬೋಪಯ್ಯ, ಸೆಸ್ಕ್ ಇಂಜಿಯರ್ ರಮೇಶ್, ಇಂಜಿನಿಯರ್ ವರೇಂದ್ರ ಸಭೆಯಲ್ಲಿ ಉಪಸ್ಥಿತರಿದ್ದರು.