ಮಡಿಕೇರಿ, ಜೂ. 4: ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆಗಳು ನಡೆಯುವದರಿಂದ ಪ್ರತಿ ವರ್ಷದ ಜೂನ್ 1 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳ, ತೊರೆಗಳು, ಕಣಿವೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಅವಧಿಯಲ್ಲಿ ಬಹುತೇಕ ಮೀನಿನ ತಳಿಗಳು ತನ್ನ ಸಂತಾನ ಅಭಿವೃದ್ಧಿಯ ಕಾರ್ಯದಲ್ಲಿ ತೊಡಗುವದರಿಂದ ಇದು ಮೀನಿನ ಜೀವನ ಚಕ್ರದಲ್ಲಿ ಅತೀ ಮುಖ್ಯ ಘಟ್ಟವಾಗಿದೆ. ಸ್ಥಳೀಯ ತಳಿಗಳು ಮುಂದಿನ ಪೀಳಿಗೆಗೆ ತಮ್ಮ ಸಂತತಿಯನ್ನು ನೀಡಲು ಸಹಾಯಕವಾಗಿರುವದರಿಂದ ಈ ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರು ಹಾಗೂ ಮೀನುಗಾರರು ಮೀನುಗಳನ್ನು ಈ ಎರಡು ತಿಂಗಳು ಹಿಡಿಯದೇ ಅವುಗಳ ಸಂತಾನ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟು ಮೀನಿನ ಸ್ಥಳೀಯ ತಳಿಗಳ ಸಂರಕ್ಷಣೆಗೆ ಸಹಕರಿಸುವಂತೆ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಕೆ.ಟಿ. ದರ್ಶನ್ ಕೋರಿದ್ದಾರೆ.