ಸಿದ್ದಾಪುರ, ಜು. 1: ಪ್ರವಾಹÀ ಪೀಡಿತ ಕರಡಿಗೋಡು ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಿತಾ ಪೂಣಚ್ಚ ಭೇಟಿ ನೀಡಿದ್ದರು. ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ 100ಕ್ಕೂ ಹೆಚ್ಚು ಕುಟುಂಬಗಳು ನದಿ ದಡದಲ್ಲಿ ವಾಸಿಸುತ್ತಿದ್ದು, ಪ್ರತೀ ವರ್ಷ ಮಳೆಗಾಲ ಸಂದರ್ಭ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 20ಕ್ಕೊ ಹೆಚ್ಚು ಕುಟುಂಬಗಳು ಅಪಾಯದಂಚಿನಲ್ಲಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿಗಳನ್ನು ಕರೆ ತಂದು ಗ್ರಾಮದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಶಾಶ್ವತ ಯೋಜನೆಯನ್ನು ರೂಪಿಸಿ ಪೈಸಾರಿ ಜಾಗದಲ್ಲಿ ಪುನರ್‍ವಸತಿ ಕಲ್ಪಿಸುವ ಚಿಂತನೆ ಮಾಡಲಾಗುವದು ಎಂದು ಹೇಳಿದ ಅವರು, ನಿವಾಸಿಗಳಿಗೆ ಅಗತ್ಯ ವಿದ್ದಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಿ ತುರ್ತು ಸೌಲಭ್ಯ ನೀಡಿ ಮುಂಜಾಗೃತಾ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ ಮಾತನಾಡಿ, ಸಿದ್ದಾಪುರ ಸುತ್ತಮತ್ತಲಿನ ಪ್ರದೇಶದಲ್ಲಿ ಹಲವು ಪೈಸಾರಿ ಜಾಗಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಕಂದಾಯ ಅಧಿಕಾರಿಗಳು ಜಾಗ ಪರಿಶೀಲನೆ ಮಾಡುತ್ತಿದ್ದಾರೆ. ಕಸ ವಿಲೇವಾರಿ ಮತ್ತು ನದಿ ದಡ ನಿವಾಸಿಗಳಿಗೆ ಪುನರ್‍ವಸತಿ ವ್ಯವಸ್ಥೆ ಮಾಡಲು ಮುಂದಾಗುವದಾಗಿ ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಪಂಕಜ, ಸುನೀತಾ, ಲೀಲಾವತಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಜೀತ್ ಕುಮಾರ್, ಪ್ರೇಮಾ, ಪೂವಮ್ಮ, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಹೆಚ್ ಮೂಸ, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.