ಕುಡೆಕಲ್ ಸಂತೋಷ್

ಮಡಿಕೇರಿ, ಜೂ. 8: ಧೋ... ಎಂದು ಸುರಿಯುತ್ತಿದ್ದ ಮಳೆ.., ಮಂಜು ಮುಸುಕಿದ ವಾತಾವರಣ.., ನಿರ್ಜನ ಪ್ರದೇಶದಲ್ಲಿ 500 ಅಡಿಯಷ್ಟು ಆಳದ, ಕಾಡಿನಿಂದಾವೃತವಾಗಿರುವ ಪ್ರಪಾತ.., ಮೃತ್ಯುಕೂಪವೆಂದೇ ಕರೆಯಲ್ಪಡುವ ಪ್ರಪಾತಕ್ಕೆ ಉರುಳಿದ ವಾಹನ ದೊಳಗಿದ್ದ ಕಂದಮ್ಮಗಳ ಚೀರಾಟ.., ಇನ್ನೇನು ಜವರಾಯನ ಪಾದ ಸೇರಬೇಕೆನ್ನುವಷ್ಟರಲ್ಲಿ ದೇವರ ದಯೆ.., ದೇವರ ರೂಪದಲ್ಲಿ ರಕ್ಷಿಸಿದ ಮರ.., ಆಪಾತ್ಬಾಂಧವರಂತೆ ಧಾವಿಸಿದ ರಕ್ಷಕರು.., ಇದು ಕತ್ತಲೆಕಾಡುವಿನಲ್ಲಿ ಸಂಭವಿಸಿದ ಭೀಕರ ಅವಘಡದ ಚಿತ್ರಣ. ಶಾಲಾ ಮಕ್ಕಳಿದ್ದ ವ್ಯಾನೊಂದು ಪ್ರಪಾತಕ್ಕುರುಳಿ ಮಕ್ಕಳು ಯಾವದೇ ಅಪಾಯವಿಲ್ಲದೆ ಬದುಕುಳಿದ ಪವಾಡ ಸದೃಶ ಕಥನ...

ಇಂದು ಮಧ್ಯಾಹ್ನ 2.30ರ ನಂತರ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಸಂಜೆ 4 ಗಂಟೆಗೆ ಶಾಲೆ ಬಿಡುವ ವೇಳೆಯಲ್ಲೂ ಮಳೆ ಮುಂದುವರಿದಿತ್ತು. ಶಾಲೆ ಬಿಡುವ ಸಮಯದಲ್ಲಿ ಮಡಿಕೇರಿಯಿಂದ ಕತ್ತಲೆಕಾಡುವಿನ ತನ್ನ ಮನೆಗೆ ಮಾರುತಿ ವ್ಯಾನ್‍ನಲ್ಲಿ ತೆರಳುತ್ತಿದ್ದ ಹಮೀದ್ ಕಡಗದಾಳು ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ತನ್ನ ಪುತ್ರಿ ಹಸೀನ (13) ಹಾಗೂ ಸಹೋದರಿಯ ಪುತ್ರಿ 8ನೇ ತರಗತಿಯ ಮುಬೀನ (12) ಎಂಬಿಬ್ಬರನ್ನು ಹತ್ತಿಸಿಕೊಂಡು ಕರೆದೊಯ್ಯುತ್ತಿದ್ದರು. ಕತ್ತಲೆಕಾಡು ಜಂಕ್ಷನ್ ದಾಟಿ ಮರಗೋಡು ಮಾರ್ಗವಾಗಿ ಕತ್ತಲೆಕಾಡು ಪೈಸಾರಿಗೆ ತೆರಳುತ್ತಿದ್ದಾಗ ಅನತಿ ದೂರದಲ್ಲಿ ಅಕ್ಕಪಕ್ಕದ ಮನೆಯ ಮೂವರು ಮಕ್ಕಳು ಮಳೆಯಲ್ಲಿ ನೆನೆಯುತ್ತಲೇ ನಡೆದುಕೊಂಡು ಹೋಗುತ್ತಿದ್ದರು. ಮಾನವೀಯ ನೆಲೆಯಲ್ಲಿ ಹಮೀದ್ ರಸ್ತೆ ಬದಿ ವ್ಯಾನ್ ನಿಲ್ಲಿಸಿ ಆ ಮೂವರು ಮಕ್ಕಳನ್ನು ಹತ್ತಿಸಿಕೊಂಡಿದ್ದಾರೆ. ವ್ಯಾನ್ ಚಾಲನೆ ಮಾಡಬೇಕೆನ್ನು ವಷ್ಟರಲ್ಲಿ ಇದ್ದಕ್ಕಿದ್ದ ಹಾಗೆ ವ್ಯಾನ್ ರಸ್ತೆಯ ಎಡಬದಿಯ ಪ್ರಪಾತಕ್ಕೆ ಉರುಳಿದೆ.

500 ಅಡಿ ಆಳಕ್ಕೆ : ನೋಡ-ನೋಡುತ್ತಿದ್ದಂತೆಯೇ ವ್ಯಾನ್ ಉರುಳಿಕೊಂಡು ಹೋಗಿದೆ. ಎತ್ತ ಏನಾಯಿತೆಂದು ಅರಿಯದ ಮಕ್ಕಳು ದಿಕ್ಕು ತೋಚದೆ ಕಿರುಚಾಡತೊಡಗಿದ್ದಾರೆ. ವ್ಯಾನ್‍ನ ಬಾಗಿಲು ಹಾರಿ ಹೋಗಿ ಕೆಲವು ಮಕ್ಕಳು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ಚಾಲಕ ಹಮೀದ್ ಹಾಗೂ ಪುತ್ರಿ, ಇನ್ನಿಬ್ಬರು ವ್ಯಾನ್‍ನಲ್ಲಿಯೇ ಸಿಲುಕಿದ್ದಾರೆ. ಒಂದೇ ಸಮನೆ ಉರುಳಿದ ವ್ಯಾನ್ ಇನ್ನೇನು ಕೆಳ ಬದಿಯಲ್ಲಿರುವ ಚೆಟ್ಟಳ್ಳಿ ರಸ್ತೆಗೆ ಬೀಳ ಬೇಕೆನ್ನುವಷ್ಟರಲ್ಲಿ ಸಣ್ಣ ಮರವೊಂದಕ್ಕೆ ತಾಗಿ ವ್ಯಾನ್ ನಿಂತುಕೊಂಡಿದೆ. ವ್ಯಾನ್ ನಜ್ಜುಗುಜ್ಜಾಗಿದ್ದು, ಚಕ್ರಗಳು ಹಾರಿ ಹೋಗಿ ಅಡಿಮೇಲಾಗಿ ಮರಕ್ಕೆ ಸಿಲುಕಿ ನಿಂತಿದೆ.

ಅಪಾಯದಿಂದ ಪಾರು ಅಷ್ಟೊಂದು ಆಳವಾದ ಪ್ರಪಾತ ಕ್ಕುರುಳಿದ ವ್ಯಾನ್‍ನಲ್ಲಿದ್ದ ವರೆಲ್ಲರೂ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ. ಚಾಲಕ ಹಮೀದ್ (40)ಗೆ ಕೈ ಹಾಗೂ ಭುಜಕ್ಕೆ ಗಾಯಗಳಾಗಿದ್ದು, ಬೆನ್ನಿನ ಭಾಗಕ್ಕೆ ಪೆಟ್ಟಾಗಿದೆ. ಮುಸ್ತಫಾ ಎಂಬವರ ಪುತ್ರ 8ನೇ ತರಗತಿಯ ಹೈದರ್ (12) ಹುಸೇನ್ ಎಂಬವರ ಪುತ್ರ ಮುಮ್ತಾಹಿರ್ (12), ಖಾದರ್ ಎಂಬವರ ಪುತ್ರಿ ಮುಬೀನ (12) ಹಮೀದ್ ಪುತ್ರಿ ಹಸೀನಾ (13)ರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವ್ಯಾನ್‍ನೊಳಗಡೆ ಇದ್ದ ಶಾಜಿ ಎಂಬವರ ಪುತ್ರ ಕಿಶೋರ್ (12) ಎಂಬಾತನಿಗೆ ಮಾತ್ರ ತಲೆಗೆ ಸ್ವಲ್ಪ ಪ್ರಮಾಣದ ಪೆಟ್ಟಾಗಿದೆ.

ಗಾಯಾಳುಗಳೆಲ್ಲರು ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕುಲಕರ್ಣಿ ಹಾಗೂ ಸಿಬ್ಬಂದಿಗಳು ಚಿಕಿತ್ಸೆ ನೀಡಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಇಬ್ಬರನ್ನು ನಾಳೆ ಎಕ್ಸ್‍ರೆಗೆ ಒಳಪಡಿಸಲಾಗುವದು. ಉಳಿದಂತೆ ಮೂವರನ್ನು ನಾಳೆ ಬಿಡುಗಡೆ ಮಾಡಲಾಗುವದೆಂದು ಡಾ. ಕುಲಕರ್ಣಿ ‘ಶಕ್ತಿ’ಗೆ ತಿಳಿಸಿದರು.

ಮೃತ್ಯು ಕೂಪ

ಅವಘಡ ಸಂಭವಿಸಿದ ಸ್ಥಳವನ್ನು ಮೃತ್ಯುಕೂಪವೆಂದೇ ಹೇಳಲಾಗುತ್ತದೆ. ಕಿರಿದಾದ ರಸ್ತೆಯ ಎಡಬದಿ ಭಾರೀ ಪ್ರಪಾತವಿದೆ. ಈ ಹಿಂದೆ ಇದೇ ಪ್ರದೇಶದಲ್ಲಿ ಬಸ್ಸೊಂದು ಉರುಳಿ ಬಿದ್ದು ಸಾವು - ನೋವು ಸಂಭವಿಸಿತ್ತು. ಟ್ರ್ಯಾಕ್ಟರೊಂದು ಚೆಟ್ಟಳ್ಳಿ ರಸ್ತೆಗೆ ಉರುಳಿ ಬಿದ್ದು ಪುಡಿ - ಪುಡಿಯಾಗಿತ್ತು. ಹತ್ತು ಹಲವು ಸಣ್ಣ-ಪುಟ್ಟ ಅವಘಡಗಳು ಇಲ್ಲಿ ಸಂಭವಿಸಿದೆ.

ದೂರು ನೀಡಲು ನಕಾರ ಆಸ್ಪತ್ರೆಗೆ ಗ್ರಾಮಾಂತರ ಠಾಣಾಧಿಕಾರಿ ಶಿವಪ್ರಸಾದ್ ಹಾಗೂ ಸಿಬ್ಬಂದಿಗಳು ಆಗಮಿಸಿ ಗಾಯಾಳು ಮಕ್ಕಳಿಂದ ಹೇಳಿಕೆ ಪಡೆದು ಕೊಂಡರು. ನಂತರ ಪ್ರಕರಣ ದಾಖಲಿಸುವ ಸಲುವಾಗಿ ಯಾರಾದರೂ ದೂರು ನೀಡಿ ಎಂದು ಪೋಷಕರಲ್ಲಿ ಕೋರಿಕೊಂಡರೂ ದೂರು ನೀಡಲು ನಿರಾಕರಿಸಿದರು. ‘ಇದು ಆಕಸ್ಮಿಕ ಘಟನೆಯಾಗಿದ್ದು, ನಮ್ಮ ಮಕ್ಕಳಿಗೆ ಸಹಾಯ ಮಾಡಲು ಹೋದವರ ಮೇಲೆ ದೂರು ನೀಡುವದಿಲ್ಲ’ ಎಂದು ಹೇಳಿದರು. ಅದೇ ರೀತಿ ಬರೆದು ಕೊಡುವಂತೆ ಠಾಣಾಧಿಕಾರಿ ಹೇಳಿದ ಹಿನ್ನೆಲೆಯಲ್ಲಿ ಬರೆದುಕೊಟ್ಟರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.