ಅಮ್ಮತ್ತಿ, ಜೂ. 25: ಬೆಳೆಗಾರರು ಹಾಗೂ ಕಾರ್ಮಿಕರು ಹೆಚ್ಚಿರುವ ಅಮ್ಮತ್ತಿ ಗ್ರಾಮದಲ್ಲಿನ ಒಂದಷ್ಟು ಬಡವರ್ಗದವರಿಗೆ ನಗರಗಳಲ್ಲಿ ಸಿಗುವ ವೈದ್ಯಕೀಯ ಸೇವೆ ಇಂದು ಗ್ರಾಮ ಮಟ್ಟದಲ್ಲಿ ದೊರಕುವಂತಾಗಲು ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ ಹಾಸ್ಪಿಟಲ್ ಕಾರಣೀಭೂತವಾಗಿದೆ.

ಅಮೇರಿಕ ಮೂಲದವರಿಂದ ಅಮೇರಿಕನ್ ಇಂಡಿಯಾ ಡಿಸ್ಪೆನ್ಸರಿ ಎಂದು ಆರಂಭವಾದ ಆಸ್ಪತ್ರೆ ಪ್ರಸ್ತುತ ಟಾಟಾ ಕಾಫಿ ನೇತೃತ್ವದಲ್ಲಿ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ ಹಾಸ್ಪಿಟಲ್ ಎಂದು ಮರು ನಾಮಕರಣಗೊಂಡು ಅಮ್ಮತ್ತಿಯಲ್ಲಿ ಐದು ದಶಕಗಳಿಂದ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಿದೆ.

1965ರಲ್ಲಿ ಅಮೇರಿಕ ಮೂಲದವರು ಈ ಆಸ್ಪತ್ರೆಯನ್ನು ಆರಂಭಿಸಿದರು. ಕ್ರಮೇಣ ವಿದೇಶಿ ಬಂಡವಾಳ ಕಡಿಮೆಯಾಗುತ್ತಾ ಬಂದಾಗ ಸ್ಥಳೀಯರಿಗೆ ನಡೆಸುವಂತೆ ಬಿಟ್ಟುಕೊಟ್ಟರು. ಇದರಂತೆ ಟಾಟಾ ಕಾಫಿ ಸಂಸ್ಥೆ ಟ್ರಸ್ಟ್ ಈ ಆಸ್ಪತ್ರೆಯನ್ನು ಪ್ರಸ್ತುತ ಮುನ್ನಡೆಸುತ್ತಿದೆ. ಇದೀಗ ಸುಮಾರು ರೂ. 1.5 ಕೋಟಿ ವೆಚ್ಚದಲ್ಲಿ ನವೀಕರಣಗೊಂಡು ಮೇಲ್ದರ್ಜೆಗೇರಿದೆ. ಆಸ್ಪತ್ರೆಯು 57 ಬೆಡ್‍ಗಳನ್ನು ಹೊಂದಿದ್ದು ದಿನದ 24 ಗಂಟೆ ವೈದÀ್ಯಕೀಯ ಸೇವೆ ನೀಡುತ್ತಿದೆ. ಸಾಮಾನ್ಯ ವಾರ್ಡ್, ಸೆಮಿಸ್ಪೆಷಲ್, ಸ್ಪೆಷಲ್, ಡಿಲಕ್ಸ್ ವಾರ್ಡ್ ಹೀಗೆ ರೋಗಿಗಳು ಬಯಸುವಂತಹ ವಾರ್ಡ್‍ಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಸುಸಜ್ಜಿತ ಆಪರೇಶನ್ ಥಿಯೇಟರ್, ಐಸಿಯು, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಟಿಎಂಟಿ, ಇಕೋ ಕಾರ್ಡಿಯೋಗ್ರಾಫ್, ಎಂಡೋಸ್ಕೋಪಿ, ಎನ್‍ಎಸ್‍ಟಿ ಮೆಷಿನ್, ಎಕ್ಸರೇ, ಇಸಿಜಿ, ಯೂನಿಟ್, ಫಿಸಿಯೋಥೆರಫಿ ಇಂತಹ ವೈದÀ್ಯಕೀಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಇದೀಗ ನೂತನವಾಗಿ ಗರ್ಭದೊಳಗಿನ ಮಗುವಿನ ಹೃದಯ ಬಡಿತ ಪರೀಕ್ಷಿಸುವ ಯಂತ್ರ ಹಾಗೂ ಹವಾನಿಯಂತ್ರಣ ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿದೆ. 5 ಜನ ವೈದ್ಯರು ಇಲ್ಲಿ ಸೇವೆ ನೀಡುತ್ತಿದ್ದಾರೆ.

ಕಾಫಿ ತೋಟದ ನಡುವೆ ಆಸ್ಪತ್ರೆ ಇರುವದು ರೋಗಿಗಳಿಗೆ ಪ್ರಶಾಂತ ವಾತಾವರಣ ನಿರ್ಮಿಸಿದಂತಾಗಿದೆ. ಕಸ ವಿಲೇವಾರಿಗೆ ಪ್ರತ್ಯೇಕ ಘಟಕ ನಿರ್ಮಾಣದ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಆದÀ್ಯತೆ ನೀಡಲಾಗಿದೆ. ಬಯೋ ಮೆಡಿಕಲ್ ವ್ಯವಸ್ಥೆ ಮೂಲಕ ಮಾಲಿನ್ಯ ನಿಯಂತ್ರಣವನ್ನು ಮಾಡಲಾಗುತ್ತಿದೆ. ಬಡವರಿಗೆ ಔಷಧಿ ಹೊರತುಪಡಿಸಿ ವೈದ್ಯಕೀಯ ಸೇವೆಯಲ್ಲಿ ಹಾಗೂ ಆಸ್ಪತ್ರೆ ವೆಚ್ಚದಲ್ಲಿ ರಿಯಾಯಿತಿಯನ್ನು ನೀಡುತ್ತಾ ಬರುತ್ತಿದೆ.

- ಈಶಾನ್ವಿ