ಮಡಿಕೇರಿ, ಜೂ. 10: ವಿಧಾನ ಸಭೆಯಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಶಾಂತೆಯಂಡ ವೀಣಾ ಅಚ್ಚಯ್ಯ ಸೇರಿದಂತೆ ಕಾಂಗ್ರೆಸ್‍ನ ನಾಲ್ವರು, ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್‍ನ ಓರ್ವ ಸದಸ್ಯ ಆಯ್ಕೆಯಾಗಿದ್ದಾರೆ.
ಮೇಲ್ಮನೆಗೆ ಇಂದು ನಡೆದ ಚುನಾವಣೆಯಲ್ಲಿ ವೀಣಾ ಅಚ್ಚಯ್ಯ ಅವರು 31 ಮತ ಗಳಿಸುವ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು 124 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‍ನ ನಾಲ್ವರು ಅಭ್ಯರ್ಥಿಗಳು ಸ್ಪರ್ಧೆ ಯಲ್ಲಿದ್ದರು. ಗೆಲುವಿಗೆ ತಲಾ 29 ಮತಗಳ ಅಗತ್ಯತೆಯಿತ್ತು. ಈ ಪೈಕಿ ವೀಣಾ 31 ಮತ ಗಳಿಸಿದ್ದಾರೆ. ಇನ್ನುಳಿದಂತೆ ಅಲ್ಲಂ ವೀರಭದ್ರಪ್ಪ, ರಿಜ್ವಾನ್ ಅರ್ಷದ್ ಹಾಗೂ
ಆರ್.ಬಿ. ತಿಮ್ಮಾಪುರ್ ಅವರುಗಳು ಕೂಡ ಆಯ್ಕೆಯಾಗಿದ್ದಾರೆ. 44 ಸದಸ್ಯರನ್ನು ಹೊಂದಿರುವ ಬಿಜೆಪಿ ಯಿಂದ ಈರ್ವರು ಕಣಕ್ಕಿಳಿದಿದ್ದು, ಇಬ್ಬರೂ ಕೂಡ ಆಯ್ಕೆಯಾಗಿದ್ದಾರೆ. ವಿ.ಸೋಮಣ್ಣ ಹಾಗೂ ಲೆಹರ್‍ಸಿಂಗ್ ಅವರುಗಳು ಆಯ್ಕೆಯಾಗಿದ್ದು, ಲೆಹರ್‍ಸಿಂಗ್ ಎರಡನೇ ಪ್ರಾಶಸ್ತ್ಯದ ಮತಗಳಿಂದ ಜಯ ಗಳಿಸಿದ್ದಾರೆ.
) 40 ಸದಸ್ಯಬಲ ಹೊಂದಿರುವ ಜೆಡಿಎಸ್‍ನಿಂದಲೂ ಇಬ್ಬರು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರಾದರೂ, ಓರ್ವ ಅಭ್ಯರ್ಥಿ ಮಾತ್ರ ಆಯ್ಕೆಯಾಗಿದ್ದಾರೆ. ಕೆ.ವಿ. ನಾರಾಯಣ ಸ್ವಾಮಿ ಆಯ್ಕೆಯಾಗಿದ್ದು, 30 ಮತಗಳಿಸಿದ್ದಾರೆ. ಮತ್ತೋರ್ವ ಅಭ್ಯರ್ಥಿ ಡಾ. ವೆಂಕಟಪತಿ ಕೇವಲ 5 ಮತ ಮಾತ್ರ ಗಳಿಸಿ ಸೋಲನುಭವಿಸಿದ್ದಾರೆ. ಜೆಡಿಎಸ್‍ನ 40 ಮತಗಳಿದ್ದರೂ, 35 ಮತ ಮಾತ್ರ ಸಿಕ್ಕಿದ್ದು, ಇನ್ನುಳಿದ 5 ಮತಗಳು ಅಡ್ಡ ಮತಗಳಾಗಿ ಇತರ ಅಭ್ಯರ್ಥಿಗಳ ಪಾಲಾಗಿದೆ. ಬಿಜೆಪಿಯಲ್ಲಿ 44 ಮತಗಳು ಮಾತ್ರ ಇದ್ದರೂ 31 ಮತಗಳನ್ನು ಸೋಮಣ್ಣ ಗಳಿಸಿದರೆ, ಲೆಹರ್‍ಸಿಂಗ್ ಮೊದಲ ಪ್ರಾಶಸ್ತ್ಯದಲ್ಲಿ 27 ಮತ ಗಳಿಸಿ, ಇನ್ನುಳಿದ ಮತಗಳನ್ನು ಎರಡನೇ ಪ್ರಾಶಸ್ತ್ಯ ಮತಗಳಿಂದ ಗಳಿಸಿದ್ದಾರೆ.
ಗೆಲುವು ಸಾಧಿಸಿದ ಬಳಿಕ ಮಾತನಾಡಿದ ವೀಣಾ ಅಚ್ಚಯ್ಯ, ಕೊಡಗಿನ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿರುವದಾಗಿ ಭರವಸೆ ನೀಡಿದರು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು, ಸಂಘ ಸಂಸ್ಥೆಗಳ ಪ್ರಮುಖರನ್ನು ಒಗ್ಗೂಡಿಸಿಕೊಂಡು ಸೂಕ್ತ ಸಲಹೆ ಸೂಚನೆಗಳ ಆಧಾರದಲ್ಲಿ ಜಿಲ್ಲೆಯ ಅಭ್ಯುದಯಕ್ಕಾಗಿ ಶ್ರಮಿಸುವದಾಗಿ ತಿಳಿಸಿದರು. ಶಾಂತಿ, ಸೌಹಾರ್ದತೆಗೆ ಆದ್ಯತೆ ನೀಡುವದಾಗಿ ಹೇಳಿದರು.
ತಮ್ಮ ಗೆಲುವಿಗಾಗಿ ಸಹಕರಿಸಿದ ಪಕ್ಷದ ರಾಜ್ಯ ಹಾಗೂ ಜಿಲ್ಲೆಯ ನಾಯಕರುಗಳಿಗೆ ಇದೇ ಸಂದರ್ಭ ವೀಣಾಅಚ್ಚಯ್ಯ ಕೃತಜ್ಞತೆ ಸಲ್ಲಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಈ ಹಿಂದೆ ಶ್ರಮಿಸಿದ್ದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಜಿಲ್ಲಾ ವಕ್ತಾರ ಕೆ.ಕೆ.ಮಂಜುನಾಥ್ ಕುಮಾರ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಅರೆಭಾಷಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹೆಮಾನ್, ಪ್ರಮುಖರಾದ ಲೋಕೇಶ್ ಕುಮಾರ್, ವಿ.ಎ. ವೆಂಕಟೇಶ್, ವಿ.ಪಿ. ಸುರೇಶ್, ಧರ್ಮಜ, ಬಿ.ಎನ್. ಪ್ರಕಾಶ್, ತಾ.ಪಂ. ಸದಸ್ಯ ಅಪ್ರು ರವೀಂದ್ರ, ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ, ಸದಸ್ಯರುಗಳಾದ ವೀಣಾಕ್ಷಿ, ಚುಮ್ಮಿದೇವಯ್ಯ, ತಜಸ್ಸುಂ, ಉದಯಕುಮಾರ್, ಪ್ರಕಾಶ್ ಆಚಾರ್ಯ ಮತ್ತಿತರರು ಹಾಜರಿದ್ದು ವೀಣಾ ಅಚ್ಚಯ್ಯ ಅವರ ಗೆಲುವನ್ನು ಸಂಭ್ರಮಿಸಿದರು.