ಮಡಿಕೇರಿ, ಜೂ. 17: ಕೊಡಗು ಮೂಲದ ಡಾ. ಕಳ್ಳಿಚಂಡ ರಶ್ಮಿ ನಂಜಪ್ಪ (ಕೆ.ಪಿ. ಲಲಿತ) ಅವರು ಬರೆದಿರುವ ಮೂರು ಪುಸ್ತಕಗಳನ್ನು ಇತ್ತೀಚೆಗೆ ಸಾಹಿತಿ ಎಸ್.ಎಲ್. ಬೈರಪ್ಪ ಮೈಸೂರಿನಲ್ಲಿ ಬಿಡುಗಡೆ ಮಾಡಿದರು.
ಅವರು ಬರೆದ ವಿವಕ್ಷಾ, ಜೀವಂತ ಪಳೆಂಬಳಿಕೆಗಳು ಹಾಗೂ ವೀರಾಜಪೇಟೆ ತಾಲೂಕಿನ ಸ್ಥಳನಾಮಗಳು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಬೈರಪ್ಪ ಅವರು ಟಿಪ್ಪು ಸುಲ್ತಾನನ ಕುರಿತು ಅರಿವಿಲ್ಲದವರು ಬರೆದುದರಿಂದ ಆತ ಭಾರೀ ಉತ್ತಮ ವ್ಯಕ್ತಿ ಎಂದು ಬಿಂಬಿಸಲ್ಪಟ್ಟಿದ್ದಾನೆ. ಬರಹಗಾರರು ತಮಗೆ ಅರಿವಿರುವ ವಿಚಾರದ ಕುರಿತು ಮಾತ್ರ ಬರೆಯುವಂತಾಗಬೇಕು ಎಂದರು.
ಮೈಸೂರು ವಿ.ವಿ. ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಪ್ರೊ. ಎನ್.ಎಂ. ತಳವಾರ್ ಹಾಗೂ ಡಾ. ರಶ್ಮಿ ನಂಜಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೇಖಕಿ ರಶ್ಮಿ ನಂಜಪ್ಪ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದಾರೆ.