ಸಿದ್ದಾಪುರ, ಮೇ 16:ಇಲ್ಲಿನ ಕರಡಿಗೋಡುವಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯ ಡಾಮರೀಕರಣಕ್ಕೆ ಒತ್ತಾಯಿಸಿ ಗ್ರಾಮಸ್ಥರು ಗ್ರಾ.ಪಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕರಡಿಗೋಡುವಿನಿಂದ ಪ್ರತಿಭಟನಾ ಜಾಥ ಮೂಲಕ ಸಿದ್ದಾಪುರ ಗ್ರಾ.ಪಂ. ಆವರಣ ಕ್ಕಾಗಮಿಸಿದ ಪ್ರತಿಭಟನಾಕಾರರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ತದನಂತರ ತಹಶೀಲ್ದಾರರು ಹಾಗೂ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದ ಪ್ರತಿಭಟನಾಕಾರರು, ಅಹೋ ರಾತ್ರಿ ಪ್ರತಿಭಟನೆ ನಡೆಸುವದಾಗಿ ಗ್ರಾ.ಪಂ. ಮುಂಭಾಗದಲ್ಲಿ ಠಿಕಾಣಿ ಹೂಡಿದರು. ಮಾತ್ರವಲ್ಲದೇ ಗ್ರಾಮಾಡಳಿತ, ಗ್ರಾ.ಪಂ. ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ವಿವಿಧ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಕಾರ್ಮಿಕ ಮುಖಂಡ ಎನ್.ಡಿ.ಕುಟ್ಟಪ್ಪ, ಕಳೆದ 10 ವರ್ಷಗಳಿಂದ ಕರಡಿಗೋಡು ಗ್ರಾಮಕ್ಕೆ ತೆರಳುವ ರಸ್ತೆ ಡಾಮರೀಕರಣವಾಗಿಲ್ಲ. ಈಗಾಗಲೇ ರಸ್ತೆಯಲ್ಲಿ ಬೃಹತ್ ಗುಂಡಿಗಳು ಉದ್ಭವಿಸಿದ್ದು, ಶಾಲಾ - ಕಾಲೇಜು ಮಕ್ಕಳು, ಸಾರ್ವಜನಿಕರು ಸೇರಿದಂತೆ ವಾಹನ ಸವಾರರಿಗೆ ತೀರ್ವ ತೊಂದರೆಯುಂಟಾಗುತ್ತಿದೆ. ಮೇ 2 ರಂದು ನಡೆಸಿದ ಪ್ರತಿಭಟನೆ ಯಲ್ಲಿ ಕಾರ್ಯನಿರ್ವಹಣಾಧಿಕಾರಿ ಯವರು 7 ದಿನಗಳೊಳಗೆ ರಸ್ತೆ ಕಾಮಗಾರಿ ಆರಂಭಿಸುವದಾಗಿ ಭರವಸೆ ನೀಡಿದ್ದು, ಇದೀಗ 14 ದಿನವಾದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಬಗ್ಗುವದಿಲ್ಲ. ತಹಶೀಲ್ದಾರರು ಸ್ಥಳಕ್ಕಾಗಮಿಸಿಬೇಕೆಂದು ಹೇಳಿದರು.

ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಗ್ರಾ.ಪಂ ಆವರಣದಲ್ಲೇ ಓಲೆ ತಯಾರಿಸಿ, ಊಟ ತಯಾರಿಸಿದರು. ತದನಂತರ ಸ್ಥಳಕ್ಕಾಗಮಿಸಿದ ವೀರಾಜಪೇಟೆ ತಹಶೀಲ್ದಾರ್ ಮಹದೇವಸ್ವಾಮಿ ಮಾತನಾಡಿ, ಮಳೆಗಾಲದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಮಳೆಗಾಲದ ನಂತರ ಕಾಮಗಾರಿ ಆರಂಭಿಸುವದಾಗಿ ಭರವಸೆ ನೀಡಿದರು. ಇದಕ್ಕೊಪ್ಪದ ಪ್ರತಿಭಟನಾ ಕಾರರು ಅಲ್ಲೇ ಕುಳಿತುಕೊಂಡು ದಿಕ್ಕಾರ ಕೂಗಿದರಲ್ಲದೇ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತದನಂತರ ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳ ಸಭೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತ್ತು. ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಮಾತನಾಡಿ, ಈಗಾಗಲೇ ಜಾಗ ಪರಿಶೀಲಿಸಲಾಗಿದ್ದು, ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ. ಮಳೆ ಕಳೆದ ಕೂಡಲೇ ಕಾಮಗಾರಿ ಆರಂಭಿಸುವದಾಗಿ ತಿಳಿಸಿದರು. ಈ ಸಂದರ್ಭ ಮಾತನಾಡಿದ ಗ್ರಾಮಸ್ಥರು, ಈಗಾಗಲೇ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ಯುಂಟಾಗಲಿದ್ದು, ರಸ್ತೆಯನ್ನು ದುರಸ್ಥಿಪಡಿಸಬೇಕೆಂದು ಹಾಗೂ ಮಳೆಗಾಲ ಕಳೆದ ಕೂಡಲೇ ರಸ್ತೆಯ ಡಾಮರೀಕರಣ ಆರಂಭಿಸಬೇಕೆಂದು ಒತ್ತಾಯಿಸಿದರು. ಇದಕ್ಕೊಪ್ಪಿದ ತಹಶೀಲ್ದಾರರು ಹಾಗೂ ಅಧಿಕಾರಿಗಳು ತಾತ್ಕಾಲಿಕವಾಗಿ ರಸ್ತೆಯ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯ ಲಾಯಿತು.

ಈ ಸಂದರ್ಭ ಗ್ರಾಮಸ್ಥರಾದ ಸೂದನ ಸತೀಶ್, ವೈಜು, ಅನಿಲ್, ಗೀತಾ ಸತೀಶ್, ಮಹೇಶ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.