ವೀರಾಜಪೇಟೆ, ಜೂ. 24: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 11ನೇ ಬ್ಲಾಕ್‍ನಲ್ಲಿ ಸುಮಾರು ರೂ. 15 ಕೋಟಿ ವೆಚ್ಚದಲ್ಲಿ ಸಿಟಿ ಸೆಂಟರ್ ಎಂಬ ಹೆಸರಿನಲ್ಲಿ ಭವ್ಯ ಕಟ್ಟಡ ನಿರ್ಮಾಣಗೊಂಡು ಮುಕ್ತಾಯದ ಹಂತ ತಲಪಿದೆ.
ಈ ಕಟ್ಟಡದಲ್ಲಿ ಪರವಾನಗಿಯ ಎಲ್ಲ ಷರತ್ತುಗಳನ್ನು ಕಟ್ಟಡದ ಮಾಲೀಕರು ಉಲ್ಲಂಘಿಸಿದ್ದಾರೆ. ಜೊತೆಗೆ ಪಾದಚಾರಿಯ (ಫುಟ್‍ಪಾತ್) ಜಾಗವನ್ನು ಕಟ್ಟಡ ಅತಿಕ್ರಮಿಸಿರುವದಾಗಿ ವಿಜಯಯನಗರÀ, ಪಂಜರ್‍ಪೇಟೆ ನಿವಾಸಿಗಳು ಪಟ್ಟಣದ ಸಾರ್ವಜನಿಕರ ಪರವಾಗಿ ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವದಾಗಿ ಇಲ್ಲಿನ ನಿವಾಸಿ ಹಾಗೂ ವಕೀಲ ಚಾರಿಮಂಡ ಸಿ. ತಿಮ್ಮಯ್ಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ರಾಜ್ಯ ಹೆದ್ದಾರಿಯ ಪಂಜರ್‍ಪೇಟೆ ರಸ್ತೆಯ ಸೆರಿನಿಟಿ ಕಲ್ಯಾಣ ಮಂಟಪದ ಸಮೀಪ ಈ ಭವ್ಯ ಕಟ್ಟಡ ತಲೆ ಎತ್ತಿದೆ. ಈ ಭಾರೀ ಕಟ್ಟಡದಲ್ಲಿ 54 ವಾಣಿಜ್ಯ ಮಳಿಗೆಗಳು, 26 ವಾಸಿಸುವ ಮನೆಗಳು, 29 ಪ್ರತ್ಯೇಕ ಶೌಚಾಲಯಗಳು, 19 ಸ್ನಾನದ ಮನೆಗಳು ನಿರ್ಮಾಣಗೊಂಡಿವೆ. ಈ ಕಟ್ಟಡಕ್ಕೆ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ನಿರ್ಮಾಣವಿಲ್ಲ. ಇದಕ್ಕೆ ಖಾಲಿ ಜಾಗವು ಇಲ್ಲ. ಕಟ್ಟಡದ ಮಾಲೀಕರು ಶೌಚಾಲಯದ ತ್ಯಾಜ್ಯ ಹಾಗೂ ಕೊಳಚೆ ನೀರನ್ನು ಪಂಚಾಯಿತಿಗೆ ಸೇರಿದ ರಾಜ ಕಾಲುವೆಗೆ ಹರಿಸುವ ಉದ್ದೇಶವನ್ನು ಹೊಂದಿದ್ದಾರೆ. ಕಟ್ಟಡದ ಮಾಲೀಕರು ಮೂರು ಅಂತಸ್ತು ಕಟ್ಟಡಕ್ಕೆ ಅನುಮತಿ ಪಡೆದು ಐದು ಅಂತಸ್ತುಗಳನ್ನು ನಿರ್ಮಿಸಿದ್ದಾರೆ. ಕಟ್ಟಡ ಪರವಾನಗಿಯ ಅವಧಿ ತಾ. 15.5.2016ಕ್ಕೆ ಮುಗಿದಿದ್ದರೂ ಪರವಾನಗಿ ನವೀಕರಣಗೊಳ್ಳದೆ ಕಾಮಗಾರಿ ಮುಂದುವರೆದಿದೆ. ಇದರಲ್ಲಿ ಸಂಬಂಧಿಸಿದ ಅಧಿಕಾರಿ ಗಳು ಶಾಮಿಲಾಗಿರುವ ಶಂಕೆ ಇದೆ. ಇದಕ್ಕೆ ಪಟ್ಟಣ ಪಂಚಾಯಿತಿಯ ಇಬ್ಬರು ಹಿರಿಯ ಸದಸ್ಯರುಗಳು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ತಿಮ್ಮಯ್ಯ ಆರೋಪಿಸಿದರು.
ವಿಜಯನಗರದ ನಿವಾಸಿ ಸಂಜು ಬೋಜಣ್ಣ ಮಾತನಾಡಿ, ಈ ಕಟ್ಟಡದ ನಿರ್ಮಾಣದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕಟ್ಟಡಕ್ಕೆ ಸೆಟ್‍ಬ್ಯಾಕ್ ವ್ಯವಸ್ಥೆಯ ಅಂತರವಿಲ್ಲ. ನೀರಿನ ವ್ಯವಸ್ಥೆ ಇಲ್ಲ. ಕಟ್ಟಡ ಪರವಾನಗಿಯ ಷರತ್ತನ್ನು ಎಲ್ಲ ರೀತಿಯಿಂದಲೂ ಉಲ್ಲಂಘಿಸಿದ್ದಾರೆ. ಕಟ್ಟಡದ ಮಾಲೀಕರ ಮೇಲೆ ಪ.ಪಂ. ಕ್ರಮ ಕೈಗೊಳ್ಳಬೇಕಾಗಿದೆ. ಪರವಾನಗಿಯಲ್ಲಿ ತೋರಿಸಿದಂತೆ ಇರುವ ಕಟ್ಟಡವನ್ನು ಉಳಿಸಿ ಇತರ ಎಲ್ಲ ಕಟ್ಟಡವನ್ನು ನೆಲಸಮಗೊಳಿಸಬೇಕಾಗಿದೆ ಎಂದರು.
ಗೋಷ್ಠಿಯಲ್ಲಿ ವಿಜಯನಗರದ ನಿವಾಸಿಗಳಾದ ಮುಜಾಹಿರ್ ತಾಹ, ಸಿ.ಎನ್. ಕಾರ್ಯಪ್ಪ ಮತ್ತಿತರರು ಹಾಜರಿದ್ದರು.