ಗೋಣಿಕೊಪ್ಪಲು, ಜೂ.27: ಇಲ್ಲಿಗೆ ಸಮೀಪ ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಯನ್ನು ಶಾಸಕ ಕೆ.ಜಿ.ಬೋಪಯ್ಯ ಇಂದು ಅಪರಾಹ್ನ ನೆರವೇರಿಸಿದರು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಲ್ಲಿ ಸುಮಾರು ರೂ.20 ಲಕ್ಷ ವೆಚ್ಚದ ಕಾಮಗಾರಿ ಶೇ.80 ಭಾಗ ಪೂರ್ಣಗೊಂಡಿದ್ದು, ಹೊಸಕೋಟೆ ವ್ಯಾಪ್ತಿಯ ಗುಂಪು ಮನೆಗಳಿಗೆ ಇದೀಗ ನೂತನ ಪೈಪ್ ಲೈನ್ ಮೂಲಕ ನೀರು ಸರಬರಾಜಾಗುತ್ತಿದೆ. ಹೊಸಕೋಟೆಯ ಕಳ್ಳೀರ ಬಾಣೆ ಎಂಬಲ್ಲಿ ಹಲವು ವರ್ಷಗಳಿಂದ ಅಲ್ಲಿನ ನಿವಾಸಿಗಳು ಕುಡಿಯುವ ನೀರಿನ ತೀವ್ರ ಬವಣೆ ಅನುಭವಿಸಿದ್ದರು.

ಇದೇ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬೋಪಯ್ಯ ಅವರು, ಬಿಳುಗುಂದ ಗ್ರಾ.ಪಂ.ನ ಹೊಸಕೋಟೆ ಗ್ರಾಮ ಸ್ವಾತಂತ್ರ್ಯ ಪೂರ್ವದಿಂದಲೂ ಅಭಿವೃದ್ಧಿ ವಂಚಿತ ಗ್ರಾಮವಾಗಿದ್ದು, ಯಾವದೇ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆ ಬಗೆಹರಿಸುವಲ್ಲಿ ಮುತುವರ್ಜಿ ವಹಿಸಿರಲಿಲ್ಲ. ಇಲ್ಲಿನ ಜನತೆಗೆ ಸಮಗ್ರ ಕುಡಿಯುವ ನೀರು ಅನುಷ್ಟಾನ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ರೂ.20 ಲಕ್ಷ ಯೋಜನೆ ಕಾರ್ಯಗತವಾಗಿದೆ. ಈ ವಿಭಾಗದಲ್ಲಿ ನಾಲ್ಕು ತೆರೆದ ಬಾವಿ ಹಾಗೂ ಇನ್ನು ಬಾಕಿ ಇರುವ ಕಾಲೋನಿಗಳಿಗೆ, ಗುಂಪು ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಮೂಲಕ ಎಲ್ಲರಿಗೂ ಮೂಲಭೂತ ಸೌಲಭ್ಯವನ್ನು ಹಂತ ಹಂತವಾಗಿ ಕಲ್ಪಿಸಲಾಗುವದು ಎಂದು ಹೇಳಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅನ್ವಯ ಕೈಕೇರಿ, ಕಳತ್ಮಾಡು ಹಾಗೂ ಹೊಸಕೋಟೆಗೂ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೇ ಸಂದರ್ಭ ಬಿಳುಗುಂದ-ಹೊಸಕೋಟೆ ರಸ್ತೆಗೆ ಶಾಸಕರ ಅನುದಾನ ರೂ.6 ಲಕ್ಷ ಹಾಗೂ ಜಿ.ಪಂ.ರೂ 3 ಲಕ್ಷ ಅನುದಾನದ ಮೂಲಕ ರಸ್ತೆ ಕಾಮಗಾರಿಯನ್ನು ಈ ಹಿಂದೆ ಭರವಸೆ ನೀಡಿರುವಂತೆಯೇ ಪೂರ್ಣಗೊಳಿಸಲಾಗಿದೆ.

ಈ ಭಾಗದಲ್ಲಿ ಬಿಪಿಎಲ್ ಅಥವಾ ಎಪಿಎಲ್ ಯಾವದೇ ಫಲಾನುಭವಿ ಗಳಿದ್ದರೂ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುತ್ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವದು. ಈಗಾಗಲೇ ರೂ.7 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು,ಇನ್ನೂ ರೂ.60 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೋಪಯ್ಯ ವಿವರಿಸಿದರು.

ಇದೇ ಸಂದರ್ಭ ಹೊಸಕೋಟೆ ಜನತೆಗೆ ದಾರಿದೀಪ ಹಾಗೂ ಸೋಲಾರ್ ಬೀದಿ ದೀಪ ಅಳವಡಿಸಿರುವ ಕುರಿತು ಜಿ.ಪಂ.ಸದಸ್ಯ ವಿಜು ಸುಬ್ರಮಣಿ ಹಾಗೂ ತಾ.ಪಂ.ಸದಸ್ಯ ಅಜಿತ್‍ಕರುಂಬಯ್ಯ ಮಾಹಿತಿ ನೀಡಿದರು.

ಹೊಸೂರು ಗ್ರಾ.ಪಂ.ಅಧ್ಯಕ್ಷ ಕೊಲ್ಲಿರ ಗೋಪಿ ಚಿಣ್ಣಪ್ಪ, ಮಾಜಿ ಜಿ.ಪಂ.ಸದಸ್ಯ ಕೊಲ್ಲೀರ ಧರ್ಮಜ ಅವರ ಪರಿಶ್ರಮದಿಂದ ಬಿಳುಗುಂದ ಗ್ರಾ.ಪಂ.ವ್ಯಾಪ್ತಿಯಲ್ಲಿಯೂ ಉತ್ತಮ ಕಾಮಗಾರಿ ನಡೆಯಲು ಸಾಧ್ಯವಾಯಿತು ಎಂದು ಇದೇ ಸಂದರ್ಭ ಗ್ರಾಮಸ್ಥರು ಅಭಿಪ್ರಾಯಪಟ್ಟರು.

ಬಿಳುಗುಂದ ಗ್ರಾ.ಪಂ.ಅಧ್ಯಕ್ಷೆ ಕೆ.ಎ.ಅಲೀಮಾ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸದಸ್ಯರಾದ ಚಿಲ್ಲವಂಡ ಕಾವೇರಪ್ಪ, ಪಿ.ಎ.ಹನೀಫ್, ಐನಂಡ ಪ್ರತಾಪ್, ಹೆಚ್.ಪ್ರವೀಣ್, ಹೆಚ್. ಸಕುಮಾ, ವಸಂತಿ ಕೆ.ಎ., ವೀರಾಜಪೇಟೆ ಮಾರ್ಕೆಟಿಂಗ್ ಫೆಡರೇಷನ್‍ನ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ಶಾಸಕರ ಆಪ್ತ ಸಹಾಯಕ ನರಸಿಂಹ, ಗುತ್ತಿಗೆದಾರ ದಿನೇಶ್, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸರೋಜಿನಿ, ಗ್ರಾ.ಪಂ.ಪಿಡಿಓ ಪ್ರಮೋದ್ ಪಿ.ಕೆ. ಮುಂತಾದವರು ಉಪಸ್ಥಿತರಿದ್ದರು.

ವರದಿ:- ಟಿ.ಎಲ್.ಶ್ರೀನಿವಾಸ್