ಮಡಿಕೇರಿ, ಮೇ 18: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಸಂಸ್ಥೆಯ ಪದಾಧಿಕಾರಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ “ವಿಂಧ್ಯಾ” ಶೀರ್ಷಿಕೆಯಡಿ ಮೇ 21 ಮತ್ತು 22 ರಂದು ಮಡಿಕೇರಿಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಧ್ಯಾ ಕಾರ್ಯಕ್ರಮದ ಜಿಲ್ಲಾಧ್ಯಕ್ಷ ಕೆ.ಕೆ.ವಿಶ್ವನಾಥ್ ಎರಡು ದಿನಗಳ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ವಿಂಧ್ಯಾ ತರಬೇತಿ ಶಿಬಿರವನ್ನು ರೋಟರಿ ಅಂತರ್ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕರಾದ ಸಿ. ಭಾಸ್ಕರ್ ಅವರು ಮೇ 21 ರಂದು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಮಾಜಿ ರಾಜ್ಯಪಾಲ ಟಿ.ಎನ್. ಸುಬ್ರಮಣ್ಯಂ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಡಾ.ಎ. ಭಾರತೇಶ್ ವಹಿಸಲಿದ್ದಾರೆ.
ಶಿಬಿರದಲ್ಲಿ 450 ಕ್ಕೂ ಹೆಚ್ಚಿನ ಸದಸ್ಯರು ಭಾಗವಹಿಸಲಿದ್ದು, ಜುಲೈ 1 ರಿಂದ ಆರಂಭಗೊಳ್ಳುವ ರೋಟರಿ ವರ್ಷದ ಸಂದರ್ಭ ಕೈಗೊಳ್ಳಬೇಕಾದ ಸಾಮಾಜಿಕ ಚಟುವಟಿಕೆಗಳ ಕುರಿತು ಶಿಬಿರದಲ್ಲಿ ತರಬೇತಿಯನ್ನು ನೀಡಲಾಗುವದು. ಮುಂದಿನ ಒಂದು ವರ್ಷ ಕಾಲ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಸಂಸ್ಥೆಯ ಹಿರಿಯರು ಮಾರ್ಗದರ್ಶನ ನೀಡಲಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು. ರೋಟರಿ ಸಂಸ್ಥೆಯ ತರಬೇತುದಾರರಾದ ಡಾ.ರವಿ ಅಪ್ಪಾಜಿ ಮಾತನಾಡಿ, ಮುಂದಿನ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಈ ಶಿಬಿರ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ರೋಟರಿ ಜಿಲ್ಲೆಯಲ್ಲಿ ಸಂಸ್ಥೆಯ 125 ಘಟಕಗಳಿದ್ದು, ಇದನ್ನು 3181 ಮತ್ತು 3182 ಎನ್ನುವ ಎರಡು ಪ್ರತ್ಯೇಕ ವಿಭಾಗಗಳನ್ನಾಗಿ ವಿಂಗಡಿಸಿರು ವದಾಗಿ ತಿಳಿಸಿದರು. ಸುದ್ದಿಗೋಷ್ಠಿ ಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೆ.ಬಿ. ಸತೀಶ್ ಪೂಣಚ್ಚ, “ವಿಂಧ್ಯಾ” ಕಾರ್ಯಕ್ರಮದ ಕಾರ್ಯದರ್ಶಿ ಜಿ.ಆರ್. ರವಿ ಉಪಸ್ಥಿತರಿದ್ದರು.