ಮಡಿಕೇರಿ, ಜೂ. 26: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2016-17ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ವಿವಿಧ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯಧನಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಸ್ವಾವಲಂಬನಾ-ಮಾರ್ಜಿನ್ ಹಣ ಸಾಲದ ಯೋಜನೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವ್ಯಾಪಾರ, ಕೈಗಾರಿಕೆ, ಕೃಷಿ ಮತ್ತು ಸೇವಾವಲಯದಲ್ಲಿ ಬರುವ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಕನಿಷ್ಟ 10 ಸಾವಿರಗಳಿಂದ ಗರಿಷ್ಠ ರೂ. 5 ಲಕ್ಷವರೆಗೆ ರಾಷ್ಟ್ರೀಕೃತ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕನಿಷ್ಟ ಮಾರ್ಜಿನ್ ಹಣ ರೂ. 6 ಸಾವಿರಗಳಿಂದ ಗರಿಷ್ಠ ರೂ. 1 ಲಕ್ಷಗಳವರೆಗೆ ಸಾಲ ಹಾಗೂ ಸಹಾಯಧನ ಕನಿಷ್ಟ ರೂ. 5 ಸಾವಿರಗಳಿಂದ ಗರಿಷ್ಠ ರೂ. 25 ಸಾವಿರದವರೆಗೆ ನೀಡಲಾಗುವದು. ಸಾಲಕ್ಕೆ ಶೇ. 6 ರ ಬಡ್ಡಿ ದರವನ್ನು ನಿಗದಿಪಡಿಸಿದೆ. ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ. 1,03,000ಗಳ ಒಳಗಿರಬೇಕು.

ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿಯಲ್ಲಿ ಸಣ್ಣ ರೈತರಿಗೆ ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 1 ರಿಂದ 05 ಏಕರೆ ಒಳಗಿರುವ ಖುಷ್ಕಿ ಜಮೀನುಗಳಿಗೆ ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಡುವ ಮುಖೇನ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಘಟಕ ವೆಚ್ಚ 2 ಲಕ್ಷಗಳಾಗಿರುತ್ತವೆ. ಈ ಮೊತ್ತದಲ್ಲಿ ರೂ. 1.50 ಲಕ್ಷ ಸಹಾಯಧನ, 50 ಸಾವಿರಗಳು ಸಾಲವಾಗಿರುತ್ತವೆ. ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ. 1,03,000ಗಳ ಒಳಗಿರಬೇಕು.

ಅರಿವು ಯೋಜನೆ(ವಿದ್ಯಾಭ್ಯಾಸ ಸಾಲ)ಯಡಿಯಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದಿಂದ ಬಿ.ಇ, ಎಂ.ಬಿ.ಬಿ.ಎಸ್., ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್., ಎಂ.ಡಿ., ಬಿ.ಫಾರ್ಮ., ಡಿ.ಎಡ್., ಐ.ಟಿ.ಐ., ಡಿಪ್ಲೋಮಾ, ಬಿಎಸ್‍ಸಿ-ನರ್ಸಿಂಗ್, ಬಿ.ಡಿ.ಎಸ್ ಬಿ.ಬಿ.ಎಂ, ಬಿ.ಎಡ್, ಎಂ.ಎ, ಪಿಹೆಚ್.ಡಿ, ಎಂ.ಕಾಂ, ಎಂಎಸ್‍ಸಿ, ಎಂ.ಫಾರ್ಮಾ, ಎಲ್.ಎಲ್.ಬಿ, ಹಾಗೂ ಇತರೆ ವೃತ್ತಿಪರ ಕೋರ್ಸ್‍ಗಳಿಗೆ ರೂ. 5 ಸಾವಿರಗಳಿಂದ ವ್ಯಾಸಂಗಕ್ಕೆ ಅನುಗುಣವಾಗಿ 75 ಸಾವಿರಗಳವರೆಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಸಾಲಕ್ಕೆ ಶೇ.2 ರಂತೆ ಸೇವಾ ಶುಲ್ಕ ಪಡೆಯಲಾಗುವದು. ಅರ್ಜಿದಾರರ ವಾರ್ಷಿಕ ಆದಾಯ 6 ಲಕ್ಷ ರೂ. ಗಳ ಒಳಗಿರಬೇಕು.

ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಕ್ರಿಶ್ಚಿಯನ್ ಜನಾಂಗದ ಅಭಿವೃದ್ಧಿಗಾಗಿ ಅರಿವು ಸಾಲ ಯೋಜನೆಯಡಿಯಲ್ಲಿ ಮೇಲಿನ ಎಲ್ಲಾ ನಿಬಂಧನೆಗಳಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವದು.

ಶ್ರಮಶಕ್ತಿ ಸಾಲ ಹಾಗೂ ಸಹಾಯಧನ ಯೋಜನೆಯಡಿಯಲ್ಲಿ ಸಾಂಪ್ರದಾಯಿಕ ವೃತ್ತಿ ಕುಲ ಕಸುಬುದಾರರಿಗೆ ಅಂದರೆ ಕುಂಬಾರಿಕೆ, ಕ್ಷೌರಿಕ, ಪೊರಕೆ ಕಡ್ಡಿ ತಯಾರಿಕೆ, ಟಿನ್ ವಸ್ತುಗಳ ತಯಾರಿಕೆ, ಟೈಲರಿಂಗ್, ಅಗರಬತ್ತಿ ತಯಾರಿಕೆ, ಹೀಗೆ ರಾಜ್ಯ ಸರ್ಕಾರವು ಸುಮಾರು 40 ವಿವಿಧ ವೃತ್ತಿ ಕುಲಕಸುಬುಗಳನ್ನು ಗುರುತಿಸಿರುವ ಎಲ್ಲಾ ಕುಲಕಸುಬುಗಳಿಗೆ ನಿಗಮದಿಂದ ರೂ. 10 ಸಾವಿರಗಳಿಂದ ಗರಿಷ್ಠ 50 ಸಾವಿರಗಳಿಗೆ ಸಾಲ ಹಾಗೂ ಸಹಾಯಧನವನ್ನು ಕಲ್ಪಿಸಲಾಗುತ್ತಿದೆ. ಸಾಲಕ್ಕೆ ಶೇ. 4 ರ ಬಡ್ಡಿ ದರವನ್ನು ವಿಧಿಸಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 74 ಆರ್ಥಿಕ ಗುರಿ 37.00 ಲಕ್ಷಗಳಾಗಿರುತ್ತದೆ. ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ. 1,03,000ಗಳ ಒಳಗಿರಬೇಕು.

ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಕ್ರಿಶ್ಚಿಯನ್ ಜನಾಂಗದ ಅಭಿವೃದ್ಧಿಗಾಗಿ ಶ್ರಮಶಕ್ತಿ ಸಾಲ ಯೋಜನೆಯಡಿಯಲ್ಲಿ ಮೇಲಿನ ಎಲ್ಲಾ ನಿಬಂಧನೆಗಳಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವದು. ಈ ಯೋಜನೆಗೆ ಜಿಲ್ಲೆಗೆ ಪ್ರಸಕ್ತ ಭೌತಿಕ ಗುರಿ 37 ಆರ್ಥಿಕ ಗುರಿ 18.50 ಲಕ್ಷಗಳಾಗಿರುತ್ತದೆ.

ಮೈಕ್ರೋಲೋನ್ ಯೋಜನೆಯಡಿಯಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಟಿತ ಗುಂಪುಗಳಿಗೆ ಅವರು ವಾಸಿಸುವ ಅರೆನಗರ ಹಾಗೂ ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಗೂ ಪುರುಷ ಸ್ವಸಹಾಯ ಗುಂಪುಗಳಿಗೆ ವಿವಿಧ ಸಣ್ಣ ವ್ಯಾಪಾರಗಳಾದ ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು, ಹೂವು, ಕಡ್ಲೆಕಾಯಿ, ಬೀಡಿ ಕಟ್ಟುವದು, ಅಗರಬತ್ತಿ ತಯಾರಿಕೆ, ಟೀಸ್ಟಾಲ್ ಹಾಗೂ ಇತರೆ ಸಣ್ಣ ವ್ಯಾಪಾರ ಕೈಗೊಳ್ಳಲು ರೂ. 10 ಸಾವಿರಗಳನ್ನು ಪ್ರತಿ ಸದಸ್ಯರಿಗೆ ಸ್ವಸಹಾಯ ಸಂಘದ ಮುಖೇನ ಸಾಲ ನೀಡಲಾಗುವದು. ಈ ಯೋಜನೆಯಡಿ ರೂ. 5 ಸಾವಿರಗಳು ಸಾಲ ಹಾಗೂ ರೂ. 5 ಸಾವಿರಗಳ ಸಹಾಯ ಧನವಾಗಿರುತ್ತದೆ. ಈ ಯೋಜನೆಗೆ ಶೇ. 5 ರ ಬಡ್ಡಿ ದರವನ್ನು ವಿಧಿಸಲಾಗುವದು. ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ. 1,03,000ಗಳ ಒಳಗಿರಬೇಕು.

ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಕ್ರಿಶ್ಚಿಯನ್ ಜನಾಂಗದ ಅಭಿವೃದ್ಧಿಗಾಗಿ ಮೈಕ್ರೊಲೋನ್ ಸಾಲ ಯೋಜನೆಯಡಿಯಲ್ಲಿ ಮೇಲಿನ ಎಲ್ಲಾ ನಿಬಂಧನೆಗಳಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವದು.

ಮನೆ ಕಟ್ಟಡ ಬಡ್ಡಿ ಸಹಾಯಧನ ಯೋಜನೆಯಡಿ ಕ್ರಿಶ್ಚಿಯನ್ ಜನಾಂಗದ ಅಭಿವೃದ್ಧಿಗಾಗಿ ಮನೆ ನಿರ್ಮಾಣ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಇತರೆ ಅಂಗೀಕೃತ ಹಣಕಾಸು ಸಂಸ್ಥೆಗಳಿಂದ ಫಲಾಪೇಕ್ಷಿಗಳು ಗರಿಷ್ಠ ಐದು ಲಕ್ಷ ರೂಪಾಯಿಗಳವರೆಗೆ, ಈಗಾಗಲೇ ಸಾಲ ಪಡೆದು ಸಾಲಕ್ಕೆ ಪಾವತಿಸಿದ ಬಡ್ಡಿಯನ್ನು ಗರಿಷ್ಠ 1 ಲಕ್ಷಗಳವರೆಗೆ ರಿಯಾಯಿತಿ ಸಹಾಯಧನವಾಗಿ ಪರಿಗಣಿಸಿ, ಬ್ಯಾಂಕ್‍ಗೆ ಸಹಾಯಧನವನ್ನು ಬಿಡುಗಡೆಗೊಳಿಸಲಾಗುವದು. ಈ ಯೋಜನೆಯಡಿ ದಿನಾಂಕ 1.04.2007 ರ ನಂತರ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಇತರೆ ಅಂಗೀಕೃತ ಹಣಕಾಸು ಸಂಸ್ಥೆಯಿಂದ ಈಗಾಗಲೇ ಗೃಹಸಾಲ ಪಡೆದಿರುವ ಫಲಾಪೇಕ್ಷಿಗಳು ಮಾತ್ರ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಅರ್ಜಿದಾರರ ವಾರ್ಷಿಕ ಆದಾಯ ರೂ. 1,50,000ಗಳ ಒಳಗಿರಬೇಕು.

ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ ಮೇಲ್ಪಟ್ಟು 55 ವರ್ಷದೊಳಗೆ ವಯೋಮಿತಿಯಿರಬೇಕು. ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರುವವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವದಿಲ್ಲ. ಅರ್ಜಿ ಸಲ್ಲಿಸಲು ಆಧಾರ್(UIಆ) ಪ್ರತಿಯು ಕಡ್ಡಾಯವಾಗಿರುತ್ತದೆ. ಈಗಾಗಲೇ ಸಾಲ ಮನ್ನಾ ಆಗಿರುವ ಫಲಾನುಭವಿಗಳಿಗೆ ಹೊಸದಾಗಿ ಸಾಲ ನೀಡಲಾಗುವದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ವಾರ್ಡ್ ನಂ. 7, ರಾಮಮಂದಿರದ ಹತ್ತಿರ, ಹೊಟೇಲ್ ಹಿಲ್ ವ್ಯೂ ಹತ್ತಿರ, ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ, ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಅರ್ಜಿಗಳನ್ನು ಪಡೆಯ ಬಹುದಾಗಿದೆ. ಅರ್ಜಿಗಳನ್ನು ಪಡೆದುಕೊಳ್ಳಲು ಜು. 15 ಕಡೆಯ ದಿವಸವಾಗಿರುತ್ತದೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಜು. 20 ಕೊನೆಯ ದಿನ ಆಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ: 08272-220449 ಹಾಗೂ ನಿಗಮದ ವೆಬ್‍ಸೈಟ್ ತಿತಿತಿ.ಞmಜಛಿ.ಞಚಿಡಿ.ಟಿiಛಿ.iಟಿ ನಲ್ಲಿಯು ಸಹ ಅರ್ಜಿಗಳನ್ನು ಪಡೆಯಬಹುದಾಗಿದೆ.