ಅಮ್ಮತ್ತಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಆರ್ಟ್ ಆಫ್ ಲಿವಿಂಗ್ನ ಅಮ್ಮತ್ತಿ ಶಾಖೆಯ ಆಶ್ರಯದಲ್ಲಿ 2ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅಮ್ಮತ್ತಿ ಕೊಡವ ಸಮಾಜದಲ್ಲಿ ಆಚರಿಸಲಾಯಿತು.
ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಯೋಜಿಸಿರುವದು ಯೋಗದ ಮಹತ್ವವನ್ನು ಸಾರುತ್ತಿದೆ. ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಯೋಗ ಅವಶ್ಯಕ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ಹೇಳಿದರು. ಶಾಂತಿ ಸಹಬಾಳ್ವೆ ಮತ್ತು ಸಾಮರಸ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದರಲ್ಲದೆ, ಪ್ರಾಣಾಯಾಮ, ಆಸನ ಮತ್ತಿತರ ಯೋಗವನ್ನು ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಜೀವನದಲ್ಲಿ ರೂಢಿಸಿಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಕರ್ನಲ್ ಪಟ್ಟಡ ಕರುಂಬಯ್ಯ, ಉತ್ತಮ ಜೀವನ ಶೈಲಿ ಹಾಗೂ ಆರೋಗ್ಯಯುತ ಬದುಕಿಗೆ ಯೋಗ ಸಹಕಾರಿಯಾಗಿದೆ. ಮಾನಸಿಕ ನೋವು ನಿವಾರಣೆ ಮತ್ತು ಉತ್ತಮ ದೈಹಿಕ ಚಟುವಟಿಕೆಗೆ ಯೋಗ ಅಳವಡಿಸಿಕೊಳ್ಳುವದು ಅತಿ ಅಗತ್ಯವಾಗಿದೆ ಎಂದರು.
ಯೋಗ ಶಿಕ್ಷಕ ಅಳಮೇಂಗಡ ರಾಜಪ್ಪ ಯೋಗದ ಮಹತ್ವದ ಕುರಿತು ಮಾತನಾಡಿ, ಸರಳ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡಿಸಿದರು. ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪದ್ಮಾರ್ಜುನ್ ನಿರೂಪಿಸಿದರೆ, ಅರುಣ್ ಸ್ವಾಗತಿಸಿ, ಉಪನ್ಯಾಸಕ ಶಾಜಿ ವಂದಿಸಿದರು.