ಆಲೂರು-ಸಿದ್ದಾಪುರ, ಜೂ. 25: ಉತ್ತಮ ವಾತಾವರಣ ಹಾಗೂ ಪರಿಶುದ್ಧ ವಾಯು ಸೇವನೆಯಿಂದ ವ್ಯಕ್ತಿಯ ಆರೋಗ್ಯ ಉತ್ತಮವಾಗಿರಬೇಕಾದರೆ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಜಿ.ಪಂ. ಸದಸ್ಯ ಸಿ.ಟಿ. ಪುಟ್ಟರಾಜು ಅಭಿಪ್ರಾಯಪಟ್ಟರು.
ಕೊಡ್ಲಿಪೇಟೆ ಸಮೀಪದ ದೊಡ್ಡಕೊಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ವತಿಯಿಂದ ನಡೆದ ವಿಶ್ವಪರಿಸರ ದಿನಾಚರಣೆ ಪ್ರಯುಕ್ತವಾಗಿ ಹಮ್ಮಿಕೊಂಡ ಶಾಲಾ ಆವರಣ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ನೂತನ ಜಿ.ಪಂ. ಮತ್ತು ತಾ.ಪಂ. ಸದಸ್ಯರಿಗಾಗಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕೊಡ್ಲಿಪೇಟೆ ಉದ್ಯಮಿ ಭಗವಾನ್‍ಗೌಡ ಮಾತನಾಡಿ, ಇಂದು ಗಿಡ-ಮರಗಳನ್ನು ಹಣದಾಸೆಗೆ ಬೆಳೆಸುತ್ತಿರುವದು ಒಳ್ಳೆಯ ಬೆಳವಣಿಗೆಯಲ್ಲ. ತೋಟಗಳಲ್ಲಿ ಸಿಲ್ವರ್ ಮರಗಳಂತಹ ಆದಾಯ ತಂದುಕೊಡುವ ಮರಗಳನ್ನು ಬೆಳೆಸಿದರೆ ವಾತಾವರಣ ಉತ್ತಮಗೊಳ್ಳುವದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೊಡ್ಲಿಪೇಟೆ ಗ್ರಾ.ಪಂ. ಉಪಾಧ್ಯಕ್ಷ ವಿಜಯ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮಲ್ಲೇಗೌಡ, ಕೊಡ್ಲಿಪೇಟೆ ಕ್ಲಸ್ಟರ್ ಸಿಆರ್‍ಪಿ ಸುರೇಶ್, ಮಲ್ಲಿಕಾರ್ಜುನ ಪ್ರಮುಖರಾದ ತಮ್ಮಯ್ಯ, ಶೋಭಿತ್‍ಗೌಡ, ಹೊನ್ನಮ್ಮ ಮುಂತಾದವರಿದ್ದರು.
ಈ ಸಂದರ್ಭ ಎಸ್‍ಡಿಎಂಸಿ ವತಿಯಿಂದ ಜಿ.ಪಂ. ಸದಸ್ಯ ಪುಟ್ಟರಾಜು ಹಾಗೂ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ ಅವರುಗಳನ್ನು ಸನ್ಮಾನಿಸಲಾಯಿತು.