ವೀರಾಜಪೇಟೆ, ಜೂ. 22: ವೀರಾಜಪೇಟೆ ವಿಭಾಗಕ್ಕೆ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ಮಂದಗತಿಯಲ್ಲಿ ಸುರಿಯುತ್ತಿದ್ದು, ಮಳೆಯ ರಭಸ ಕಡಿಮೆಯಾಗಿದ್ದರೂ ಈ ವ್ಯಾಪ್ತಿಯಲ್ಲಿರುವ ಕೆರೆ, ಹೊಳೆ, ತೋಡಿನಲ್ಲಿ ನೀರಿನ ಮಟ್ಟ ಏರಿಕೆಯನ್ನು ಕಂಡಿದೆ.

ವೀರಾಜಪೇಟೆ ಬಳಿಯ ಆರ್ಜಿ, ಬೇಟೋಳಿ, ಪೆರುಂಬಾಡಿ, ಹೆಗ್ಗಳ, ಬಿಟ್ಟಂಗಾಲ, ಕದನೂರು ಸೇರಿದಂತೆ ವಿವಿಧೆಡೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಈ ವಿಭಾಗದ ರೈತರು, ಮಳೆ ಮಂದಗತಿಯಲ್ಲಿ ಸುರಿದರೂ ಕೃಷಿ ಚಟುವಟಿಕೆಯ ಸಿದ್ಧತೆಯಲ್ಲಿದ್ದಾರೆ.

ತಾ. 8ರಂದು ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿದ್ದು, ತಾ. 10ರಂದು ಮುಂಗಾರು ಕೊಡಗನ್ನು ಪ್ರವೇಶಿಸಿದೆ. ತಾ. 10ರಿಂದ ನಿರಂತರವಾಗಿ 7 ದಿನಗಳವರೆಗೆ ಮಳೆ ಸುರಿದಿದ್ದು ಈಗ ಮಂದಗತಿಯಲ್ಲಿ ಮಳೆ ಸುರಿಯುತ್ತಿದೆ. ಕೊಡಗು - ಕೇರಳ ಗಡಿ ಪ್ರದೇಶದಲ್ಲಿಯೂ ಮಳೆ ಸುರಿಯುತ್ತಿದ್ದು, ಅಂತರ ರಾಜ್ಯ ರಸ್ತೆ ಸಂಚಾರಕ್ಕೆ ಯಾವದೇ ಅಡಚಣೆಯಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾ. 14ರಿಂದ ತಾ. 21ರವರೆಗೆ ಈ ವಿಭಾಗಕ್ಕೆ 47.3 ಮಿ.ಮೀ ಮಳೆ ಸುರಿದಿದೆ. ನಿನ್ನೆ ಬೆಳಗಿನಿಂದ ಇಂದು ಬೆಳಗಿನ ತನಕ 4.6ಮಿ.ಮೀ. ಮಳೆ ಸುರಿದಿದೆ. ಈಚೆಗೆ ಭಾಗಮಂಡಲ ಹಾಗೂ ನಾಪೋಕ್ಲುವಿನಲ್ಲಿ ಮಳೆಯಾದ್ದರಿಂದ ಬೇತರಿ ಗ್ರಾಮದ ಕಾವೇರಿ ಹೊಳೆಯ ನೀರಿನ ಮಟ್ಟ ಎರಡೂವರೆ ಅಡಿಗಳಷ್ಟು ಏರಿದೆ.