ಗೋಣಿಕೊಪ್ಪಲು, ಜೂ. 22: ಪೆÇನ್ನಂಪೇಟೆ-ಗೋಣಿಕೊಪ್ಪಲು-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗ ಹಾಗೂ ಹೂಟಗಳ್ಳಿ-ಹುಣಸೂರು-ಪಿರಿಯಾಪಟ್ಟಣ-ಕುಶಾಲನಗರ-ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗ ಸಮರೋಪಾದಿಯಲ್ಲಿ ಪೂರ್ಣಗೊಂಡಿದ್ದರೂ, ವೀರಾಜಪೇಟೆ-ಮಡಿಕೇರಿ ವಿದ್ಯುತ್ ಮಾರ್ಗ ಸುಮಾರು 6-7 ವರ್ಷ ನೆನೆಗುದಿಗೆ ಬಿದ್ದಿತ್ತು.
ಟೆಂಡರ್ ಪ್ರಕ್ರಿಯೆ ನಡೆದು ಗುತ್ತಿಗೆ ನೀಡಲಾಗಿದ್ದರೂ ಮಡಿಕೇರಿ ಸಮೀಪ ಕರ್ಣಂಗೇರಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ತಗಾದೆಯಿಂದಾಗಿ ಗುತ್ತಿಗೆದಾರರು ವೀರಾಜಪೇಟೆಯಿಂದ ವಿದ್ಯುತ್ ಗೋಪುರ ಕಾಮಗಾರಿ ಆರಂಭಿಸಲು ಹಿಂದೇಟು ಹಾಕಿದ್ದರು. ಇದೀಗ ವಿದ್ಯುತ್ ಗೋಪುರ ನಿರ್ಮಾಣಕ್ಕೆ ಮಡಿಕೇರಿ ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸುಮಾರು ರೂ. 8 ಕೋಟಿ ವೆಚ್ಚದಲ್ಲಿ 164 ವಿದ್ಯುತ್ ಗೋಪುರ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಾಗಿದ್ದು, ಆಗಸ್ಟ್ ಅಂತ್ಯದ ವೇಳೆಗೆ ಕಾಮಗಾರಿ ಆರಂಭವಾಗುವ ಎಲ್ಲ ಲಕ್ಷಣಗಳೂ ಕಂಡು ಬಂದಿದೆ. ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ಮೈಸೂರು ಶಾಖೆಯ (ಕೊಡಗು ಉಸ್ತುವಾರಿ) ಕಾರ್ಯಪಾಲಕ ಅಭಿಯಂತರ ಸ್ವಾಮಿಗೌಡ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದುಕುಮಾರ್ ಅವರು ‘ಶಕ್ತಿ’ಯೊಂದಿಗೆ ದಾಖಲೆ ಅವಧಿಯಲ್ಲಿ ಕಾಮಗಾರಿ ಪೂರೈಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೀರಾಜಪೇಟೆ-ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗ ಹಲವು ವರ್ಷ ನೆನೆಗುದಿಗೆ ಬಿದ್ದ ಹಿನ್ನೆಲೆ ಕೆಪಿಟಿಸಿಎಲ್ ಕಾರ್ಯಪಾಲಕ ಅಭಿಯಂತರ ಸ್ವಾಮಿ ಗೌಡ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ರಾಜ್ಯ ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು, ಕೊಡಗಿನ ಶಾಸಕರಿಗೆ ಈ ಬಗ್ಗೆ ಸಾಕಷ್ಟು ದೂರುಗಳನ್ನೂ ಕಳೆದ ಐದಾರು ವರ್ಷಗಳಲ್ಲಿ ಸಾರ್ವಜನಿಕರು ಸಲ್ಲಿಸುತ್ತಲೇ ಬಂದಿದ್ದರು. ಆದರೆ, ಅಧಿಕಾರಿಗಳು ಅರಣ್ಯ ಇಲಾಖೆಯ ಅಡ್ಡಿಯನ್ನೇ ನೆಪವಾಗಿರಿಸಿದ್ದರು. ಈ ಬಗ್ಗೆ ‘ಶಕ್ತಿ’ಯಲ್ಲಿ ಹಲವು ವರದಿಗಳು ಪ್ರಕಟಗೊಂಡಿದ್ದು, ಜನಸ್ಪಂದನ ಸಭೆ, ತ್ರೈಮಾಸಿಕ ಸಭೆಯಲ್ಲಿಯೂ ಶಾಸಕರು, ಉಸ್ತುವಾರಿ ಸಚಿವರ ಕೆಂಗಣ್ಣಿಗೂ ಕೆಪಿಟಿಸಿಎಲ್ ಅಧಿಕಾರಿಗಳು ಗುರಿಯಾಗಬೇಕಾಯಿತು. ಇದೀಗ ದಕ್ಷಿಣ ಕೊಡಗಿನ ಜನತೆಯ ಸಹನೆಗೆ ನಿಧಾನವಾಗಿಯಾದರೂ ನ್ಯಾಯ ಸಿಕ್ಕಿದೆ. ಉದ್ಧೇಶಿತ ಕಾಮಗಾರಿ ಪೂರ್ಣಗೊಂಡಲ್ಲಿ ಮಡಿಕೇರಿ-ಕುಶಾಲನಗರ-ಸೋಮವಾರಪೇಟೆ ವಿದ್ಯುತ್ ಗ್ರಾಹಕರಂತೆ ಅನಿಯಮಿತ ‘ಪವರ್ಕಟ್’ ಕಿರಿಕಿರಿಯಿಂದ ವೀರಾಜಪೇಟೆ ಜನತೆ ಪಾರಾಗಲಿದ್ದಾರೆ.
ಏನಿದು ‘ಪವರ್ಕಟ್’ ಸಮಸ್ಯೆ?
ದಕ್ಷಿಣ ಕೊಡಗಿಗೆ ಇಲ್ಲಿನ ಆನೆಚೌಕೂರು ಅರಣ್ಯದ ಮೂಲಕ ಸ್ವಾತಂತ್ರ್ಯ ನಂತರ ಹುಣಸೂರು ಹಾಗೂ ಪಿರಿಯಾಪಟ್ಟಣದ ಮೂಲಕ ಪೆÇನ್ನಂಪೇಟೆ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜಾಗುತಿತ್ತು. ಈ ಹಂತದಲ್ಲಿ ಆನೆಚೌಕೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ವಿದ್ಯುತ್ ಕಂಬ ಗಾಳಿ ಮಳೆಗೆ ಧರೆಗುಳಿದ ಸಂದರ್ಭ, ಮರದ ರೆಂಬೆಗಳನ್ನು ಕಡಿಯುವ ಸಂದರ್ಭ ಹಾಗೂ ಕಾಫಿ ತೋಟದ ಮಾರ್ಗವೂ ವಿದ್ಯುತ್ ಲೇನ್ ಹಾದು ಬರುವ ಸಂದರ್ಭ ದಕ್ಷಿಣ ಕೊಡಗು ಸಂಪೂರ್ಣ ಕತ್ತಲೆಯಲ್ಲಿ ಮುಳುಗುತ್ತಿತ್ತು.
ಕಳೆದ ಮಳೆಗಾಲ ಸಂದರ್ಭ ದಕ್ಷಿಣ ಕೊಡಗಿನ ಹಲವು ಗ್ರಾಮೀಣ ಪ್ರದೇಶಗಳು ದಾಖಲೆ 20 ದಿನಕ್ಕೂ ಅಧಿಕ ಅವಧಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕತ್ತಲೆಯಲ್ಲಿ ಮುಳುಗಿತ್ತು. ಮೊಬೈಲ್ ರೀ ಚಾರ್ಜ್, ಯುಪಿಎಸ್ ಇತ್ಯಾದಿ ಉಪಕರಣಗಳು ಸ್ತಬ್ಧವಾಗಿದ್ದು, ಗ್ರಾಮೀಣ ಜನತೆ ತೀವ್ರ ಬವಣೆ ಅನುಭವಿಸಿದ್ದರು. ಕಾಡು ಪ್ರಾಣಿಗಳ ಉಪಟಳವೂ ಕೆಪಿಟಿಸಿಎಲ್ ಹಾಗೂ ಸೆಸ್ಕ್ ಸಿಬ್ಬಂದಿಗಳಿಗೆ ಸವಾಲಾಗಿದ್ದು ರಾತ್ರಿ ವೇಳೆ ಅರಣ್ಯ ಭಾಗಕ್ಕೆ ತೆರಳಿ ವಿದ್ಯುತ್ ಲೇನ್ ದುರಸ್ತಿ, ಕಂಬ ಅಳವಡಿಕೆ ಕಾಮಗಾರಿಯೂ ನಿಧಾನವಾಗುತಿತ್ತು. ಇದರಿಂದಾಗಿ ವೀರಾಜಪೇಟೆ-ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗ ಪೂರ್ಣಗೊಂಡಲ್ಲಿ ದಕ್ಷಿಣ ಕೊಡಗಿಗೆ ಕುಶಾಲನಗರ-ಮಡಿಕೇರಿ-ವೀರಾಜಪೇಟೆ ಮಾರ್ಗ ವಿದ್ಯುತ್ ಪೂರೈಕೆಯಾಗುವ ಹಿನ್ನೆಲೆ ವಿದ್ಯುತ್ ಕಡಿತ, ಕೃತಕ ಅಭಾವದಿಂದ ಪಾರಾಗಲು ಇಲ್ಲಿನ ವಿದ್ಯುತ್ ಗ್ರಾಹಕರಿಗೆ ಸಾಧ್ಯವಿತ್ತು. ಅಂತೂ-ಇಂತೂ ವೀರಾಜಪೇಟೆ-ಮಡಿಕೇರಿ 66 ಕೆ.ವಿ. ವಿದ್ಯುತ್ ಮಾರ್ಗ ಸುಮಾರು 36.164 ಕಿ.ಮೀ. ಕ್ರಮಿಸಲಿದ್ದು ಒಟ್ಟು 164 ವಿದ್ಯುತ್ ಗೋಪುರ ಶೀಘ್ರ ಅಳವಡಿಕೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಮಾರ್ಗ ಹಾದು ಹೋಗುವ ಸಂದರ್ಭ ಕಾಫಿ ತೋಟ ಮಾಲೀಕರು, ರೈತರು, ಭೂ ಮಾಲೀಕರು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸಹಕರಿಸುವ ಅಗತ್ಯವಿದೆ. ಉದ್ದೇಶಿತ ಪೆÇನ್ನಂಪೇಟೆ-ವೀರಾಜಪೇಟೆ 66 ಕೆ.ವಿ. ವಿದ್ಯುತ್ ಮಾರ್ಗ ಅಳವಡಿಕೆ ಸಂದರ್ಭ ಹಾತೂರು ಗ್ರಾಮದಲ್ಲಿ ಕೆಲವು ಕೃಷಿಕರು ಉದ್ದೇಶಿತ ಗೋಪುರ ಅಳವಡಿಕೆಗೆ ಅಡ್ಡಿ ಆತಂಕ ವ್ಯಕ್ತಪಡಿಸಿದ್ದು ನಂತರ ಜನಪ್ರತಿನಿಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆ ಬಗೆಹರಿದಿತ್ತು.
ಪಾಲಿಬೆಟ್ಟದಲ್ಲಿ ಇತ್ತೀಚೆಗೆ ಜರುಗಿದ ಗೋಣಿಕೊಪ್ಪ-ಪಾಲಿಬೆಟ್ಟ 11 ಕೆ.ವಿ. ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗ ಉದ್ಘಾಟನೆ ಸಂದರ್ಭ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ ಕೆಪಿಟಿಸಿಎಲ್ ಅಧಿಕಾರಿಗಳಾದ ಸ್ವಾಮಿಗೌಡ ಹಾಗೂ ಚಂದುಕುಮಾರ್ ಅವರು ಆಗಸ್ಟ್-ಸೆಪ್ಟೆಂಬರ್ನಲ್ಲಿ ಮರು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವದು ಎಂದು ಆಶಾವಾದ ವ್ಯಕ್ತ ಪಡಿಸಿದ್ದಾರೆ.
ಪೆÇನ್ನಂಪೇಟೆ-ವೀರಾಜಪೇಟೆ ಹಾಗೂ ಮಡಿಕೇರಿ-ಕುಶಾಲನಗರ 66 ಕೆ.ವಿ.ವಿದ್ಯುತ್ ಮಾರ್ಗ ನಿವೃತ್ತ ಕೆಪಿಟಿಸಿಎಲ್ ಅಧಿಕಾರಿ ಕುಶಾಲಪ್ಪ ಅವರ ಉಸ್ತುವಾರಿಯಲ್ಲಿ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿತ್ತು. ಸ್ವತಃ ಕುಶಾಲಪ್ಪ ಅವರು ಅರುವತ್ತೊಕ್ಕಲು ಗ್ರಾಮದಲ್ಲಿ ನೆಲೆಸಿದ್ದು, ತಾವೂ ವಿದ್ಯುತ್ ಬವಣೆಯನ್ನು ಅನುಭವಿಸಿದ್ದು ರಾಜ್ಯ ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಗಾಳಿ ಯಂತ್ರ ಅಳವಡಿಕೆ ಸಾಧ್ಯ!
ಇಂತಹ ಒಂದು ಕೂಗು ಇದೀಗ ದಕ್ಷಿಣ ಕೊಡಗಿನ ಬಿರುನಾಣಿ ಗ್ರಾಮದಿಂದ ಕೇಳಿ ಬಂದಿದೆ. ಇತ್ತೀಚೆಗೆ ಬೆಂಗಳೂರು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪೆನಿಯು ‘ಬೆಸ್ಕಾಂ’ ವಿದ್ಯುತ್ ವ್ಯತ್ಯಯದಿಂದ ತೀವ್ರ ಬವಣೆ ಅನುಭವಿಸಿದ್ದು, ದಾವಣಗೆರೆ ಸಮೀಪ ಹರಪನ ಹಳ್ಳಿ ಗುಡ್ಡದ ಮೇಲೆ ರಾಜ್ಯದ ಅತೀ ಎತ್ತರದ ಗಾಳಿ ಯಂತ್ರವನ್ನು ಅಳವಡಿಸುವ ಮೂಲಕ ವಿದ್ಯುತ್ ಸ್ವಾವಲಂಬನೆ ನಿಟ್ಟಿನಲ್ಲಿ ಯಶಸ್ವಿ ಹೆಜ್ಜೆ ಹಾಕಿದೆ. ತನಗೆ ಬೇಕಾದ ಅಗತ್ಯ ವಿದ್ಯುತ್ ಇದೀಗ ಗಾಳಿಯಂತ್ರದ ಮೂಲಕವೇ ಫ್ಯಾಕ್ಟರಿಗೆ ಸರಬರಾಜಾಗಲಿದೆ. ಬಿರುನಾಣಿಯು ದಕ್ಷಿಣ ಕೊಡಗಿನ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಮಳೆಗಾಲದಲ್ಲಿ ಈ ವಿಭಾಗದ ಗ್ರಾಮಸ್ಥರು ತೀವ್ರ ವಿದ್ಯುತ್ ಕ್ಷಾಮವನ್ನು ಅನುಭವಿಸುತ್ತಿದ್ದಾರೆ. ಶ್ರೀಮಂಗಲ-ಕುಟ್ಟ ಹಾಗೂ ಬಿರುನಾಣಿ ವ್ಯಾಪ್ತಿಯ ಜನತೆಗೆ ವಿದ್ಯುತ್ ಸ್ವಾವಲಂಬನೆಗೆ ಇದೀಗ ಹರಪನಹಳ್ಳಿಯ ಗಾಳಿಯಂತ್ರ ಯೋಜನೆ ಮಾದರಿ ಅನುಷ್ಠಾನಗೊಳಿಸಲು ಅವಕಾಶವಿದೆ. ಕೇಂದ್ರ ಸರ್ಕಾರದಿಂದಲೂ ಸಬ್ಸಿಡಿ ಸೌಲಭ್ಯ ದೊರೆಯಲಿದ್ದು, ಬಿರುನಾಣಿ ಗ್ರಾಮಸ್ಥರು ಬಯಸಿದ್ದಲ್ಲಿ ಗಾಳಿಯಂತ್ರ ಅಳವಡಿಕೆ ನಿಟ್ಟಿನಲ್ಲಿ ಪ್ರಾಯೋಗಿಕ ಪರಿಶೀಲನೆ, ಪವನ ಶಕ್ತಿಗೆ ಅಗತ್ಯವಾದ ಗಾಳಿಯ ವೇಗದ ಬಗ್ಗೆ ಇತ್ಯಾದಿ ತಾಂತ್ರಿಕ ಸಲಹೆಯನ್ನು ಬೆಂಗಳೂರು ಬಿಇಎಲ್ನ ಇಂಜಿನಿಯರುಗಳು ನೀಡಲು ಸಿದ್ಧರಿದ್ದಾರೆ. ಒಟ್ಟಿನಲ್ಲಿ ಭವಿಷ್ಯದಲ್ಲಿ ಮಳೆಯ ಕೊರತೆ ಕಾಡುವ ಸಾಧ್ಯತೆ ಇದ್ದು ಶಿವನ ಸಮುದ್ರ, ಜೋಗ್ಫಾಲ್ಸ್ ಇತ್ಯಾದಿ ಕಿರು ಜಲ ವಿದ್ಯುತ್ ಯೋಜನೆಯಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆ ಅಸಾಧ್ಯವಾಗಬಹುದು. ಬಹುತೇಕ ರಾಜ್ಯದ ವಿದ್ಯುತ್ ಬೇಡಿಕೆಯನ್ನು ರಾಯಚೂರು, ಉಡುಪಿ, ಬಳ್ಳಾರಿ ಇತ್ಯಾದಿ ಕಡೆಗಳ ಶಾಖೋತ್ಪನ್ನ ಘಟಕಗಳಿಂದಲೇ ಹೊಂದಬೇಕಿದ್ದು, ಹೊರರಾಜ್ಯವನ್ನು ಅಧಿಕವಾಗಿ ಅವಲಂಬಿಸುವ ಸ್ಥಿತಿ ಇದೆ. ಈ ನಿಟ್ಟಿನಲ್ಲಿ ತಲಕಾವೇರಿಯಲ್ಲಿ ಕೆಟ್ಟುನಿಂತಿರುವ ಗಾಳಿಯಂತ್ರ ಪುನಶ್ಚೇತನ, ದಕ್ಷಿಣ ಕೊಡಗಿನ ಹಲವೆಡೆ ಗಾಳಿಯಂತ್ರ ಸ್ಥಾಪನೆ ಸಾಧ್ಯತೆ ಬಗ್ಗೆ ಹೊಸ ಚಿಂತನೆ ಮೂಡಿ ಬರಬೇಕಾಗಿದೆ. - ಟಿ.ಎಲ್. ಶ್ರೀನಿವಾಸ್