ಶ್ರೀಮಂಗಲ, ಮೇ 14: ಕಾಫಿ ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆ ಮಾಡಲಾದ ದಕ್ಷಿಣ ಕೊಡಗಿನಲ್ಲಿ ಖಾಸಗಿ ಮಾಲಿಕತ್ವದ ವೇಯಿಂಗ್ ಬ್ರಿಡ್ಜ್ ಅನ್ನು ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಉದ್ಘಾಟಿಸಿದರು.

ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪೊನ್ನಂಪೇಟೆ – ಕಾನೂರು- ಕುಟ್ಟ ರಸ್ತೆಯ ನಡುವೆ ಕಾನೂರು ಪಟ್ಟಣದಲ್ಲಿ ಎಸ್.ಎಂ. ಬಸಪ್ಪ ಹಾಗೂ ಕೆ.ಆರ್. ಸತೀಶ್ ಮಾಲೀಕತ್ವದಲ್ಲಿ 40 ಟನ್ ಸಾಮಥ್ರ್ಯದ ರೂ. 11 ಲಕ್ಷ ವೆಚ್ಚದಲ್ಲಿ ವೇಯಿಂಗ್ ಬ್ರಿಡ್ಜ್ ಸ್ಥಾಪನೆ ಮಾಡಲಾಗಿದೆ.

ಉದ್ಘಾಟಿಸಿ ಮಾತನಾಡಿದ ಅಳಮೇಂಗಡ ವಿವೇಕ್ ಅವರು ಈ ಭಾಗದಲ್ಲಿ ವೇಯಿಂಗ್ ಬ್ರಿಡ್ಜ್‍ನ ಕೊರತೆಯಿಂದ ಮುಖ್ಯವಾಗಿ ಕಾಫಿ ಬೆಳೆಗಾರರಿಗೆ ತಮ್ಮ ಉತ್ಪನ್ನ ಮಾರಾಟ ಮಾಡುವ ಸಂದರ್ಭ ತೊಂದರೆಯಾಗುತ್ತಿದ್ದು. ಪ್ರತೀ ಚೀಲವನ್ನು ತೂಕ ಮಾಡುವದರಿಂದ ಪ್ರತೀ ಚೀಲದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾದರೂ ಬೆಳೆಗಾರರಿಗೆ ನಷ್ಟವಾಗುತ್ತಿತ್ತು. ಇದೀಗ ಈ ತೊಂದರೆಗೆ ವೇಯಿಂಗ್ ಬ್ರಿಡ್ಜ್ ಸ್ಥಾಪನೆ ಮೂಲಕ ಪರಿಹಾರವಾದಂತಾಗಿದೆ ಎಂದು ಹೇಳಿದರು.

ಕಾಫಿ ರಾಷ್ಟ್ರೀಯ ಪಾನಿಯ ಆಂದೋಲನ ಸಮಿತಿ ಸಂಚಾಲಕ ಮಾಚಿಮಾಡ ಎಂ.ರವೀಂದ್ರ ಮಾತನಾಡಿ, ಕಾಫಿ ಬೆಳೆಗಾರರಿಗೆ ಪ್ರತೀ ಚೀಲ ತೂಕ ಮಾಡುವ ಸಂದರ್ಭ ತೂಕದಲ್ಲಿ ವ್ಯತ್ಯಾಸವಾಗಿ ನಷ್ಟವಾಗುವದನ್ನು ತಪ್ಪಿಸಲು ನೇರವಾಗಿ ಲಾರಿಯನ್ನು ಹಾಗೂ ಸರಕನ್ನು ಪ್ರತ್ಯೇಕವಾಗಿ ತೂಕ ಮಾಡುವ ಅವಕಾಶದಿಂದ ಕೆಲವು ವ್ಯಾಪಾರಿಗಳು ಬೆಳೆಗಾರರಿಗೆ ತೂಕದಲ್ಲಿ ವಂಚಿಸುವದನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದರು. ಈ ಸಂದರ್ಭ ಬಿ.ಜೆ.ಪಿ. ಯುವ ಮೋರ್ಚಾ, ಮಾಜಿ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ವೀರಾಜಪೇಟೆ ಫೆಡರೇಷನ್ ನಿರ್ದೇಶಕ ಮಚ್ಚಮಾಡ ಕಂದ ಭೀಮಯ್ಯ, ಗ್ರಾ.ಪಂ. ಸದಸ್ಯ ಸಿದ್ದು ನಾಚಪ್ಪ, ಕಾಡ್ಯಮಾಡ ಮಧು, ತಾಣಚ್ಚೀರ ಉಮೇಶ್, ವಿ.ಎನ್.ಪ್ರಹ್ಲಾದ್, ಹಾಗೂ ಮಾಲೀಕರಾದ ಎಸ್.ಎಂ.ಬಸಪ್ಪ, ಕೆ.ಆರ್.ಸತೀಶ್ ಹಾಜರಿದ್ದರು.