ಸೋಮವಾರಪೇಟೆ, ಜೂ. 23: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ವಚ್ಛತಾ ಸಪ್ತಾಹದ ಅಂಗವಾಗಿ ಇಲಾಖೆಯ ಸಿಬ್ಬಂದಿಗಳು ಸರ್ಕಾರಿ ಕಚೇರಿಗಳಿಗೆ ತೆರಳಿ ಕಟ್ಟಡಗಳ ಸ್ವಚ್ಛತೆಯನ್ನು ಪರಿಶೀಲಿಸಿದರಲ್ಲದೆ, ಕಚೇರಿ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಸಿಬ್ಬಂದಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಸಮೀಪದ ಬಳಗುಂದ ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ, ನ್ಯಾಯಾಲಯ, ತಾಲೂಕು ಪಂಚಾಯಿತಿ ಕಚೇರಿ, ತಾಲೂಕು ಕಚೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳಿಗೆ ತೆರಳಿ ಪರಿಸರ ಶುಚಿತ್ವ, ಡೆಂಗಿ, ಚಿಕೂನ್ ಗುನ್ಯ, ಮಲೇರಿಯಾ ರೋಗಗಳು ಹರಡುವ ಬಗೆ, ತಡೆಗಟ್ಟುವ ವಿಧಾನಗಳ ಬಗ್ಗೆ ಆರೋಗ್ಯ ಪರಿವೀಕ್ಷಕ ಮಹೇಶ್, ಸಿಬ್ಬಂದಿ ವಿಶಾಲ್ ನಂಜಪ್ಪ ಅವರುಗಳು ಮಾಹಿತಿ ನೀಡಿದರು.