ಗೋಣಿಕೊಪ್ಪಲು, ಜೂ. 25: ಶಾಲೆಯನ್ನು ದತ್ತು ಪಡೆಯುವ ಮೂಲಕ ಗೋಣಿಕೊಪ್ಪ ರೋಟರಿ ಸಂಸ್ಥೆಯು ಮಕ್ಕಳಲ್ಲಿ ಸಾಕ್ಷರತೆಗೆ ಹೆಚ್ಚು ಒತ್ತು ನೀಡಿದೆ ಎಂದು ರೋಟರಿ ಕಾರ್ಯದರ್ಶಿ ಪದ್ಮ ತಿಳಿಸಿದ್ದಾರೆ.

ಸಾಕಷ್ಟು ಸಮಾಜ ಸೇವೆಗೆ ಒತ್ತು ನೀಡಿರುವ ರೋಟರಿ ಸಂಸ್ಥೆ ಬೇಗೂರು ಹಾಗೂ ತೂಚಮಕೇರಿ ಶಾಲೆಯನ್ನು ದತ್ತು ಪಡೆದು ಅಲ್ಲಿ ನೀರಿನ ಮಹತ್ವ ಹಾಗೂ ಸ್ವಚ್ಛತೆಗೆ ಕಾರ್ಯಕ್ರಮ ರೂಪಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಿ ದೈಹಿಕ ಕ್ಷಮತೆ ಹೆಚ್ಚಿಸಲು ಕಾರ್ಯಕ್ರಮ ನಡೆಸಿದ್ದೇವೆ. ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ, ತಪಾಸಣಾ ಶಿಬಿರ, ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣ ಹೆಚ್ಚಿಸಲು ರೋಟ್ರ್ಯಾಕ್ಟ್ ಸ್ಥಾಪನೆ ಹಾಗೂ ವನಮಹೋತ್ಸವ ಮೂಲಕ ಉತ್ತಮ ಕಾರ್ಯಕ್ರಮ ನಡೆಸಿದ್ದೇವೆ ಎಂದರು.

ನಿಯೋಜಿತ ಅಧ್ಯಕ್ಷ ನರೇಂದ್ರ ಮಾತನಾಡಿ, ಮುಂದಿನ ಸಾಲಿನಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವದು. ದತ್ತು ಗ್ರಾಮದ ಮೂಲಕ ಗ್ರಾಮಾಭಿವೃದ್ಧಿ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವದು, ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಸುವದು ಹಾಗೂ ಕ್ಯಾನ್ಸರ್ ಪತ್ತೆ ಹಚ್ಚುವ ಆರೋಗ್ಯ ಶಿಬಿರ ನಡೆಸಲಾಗುವದು ಎಂದರು.

ಗೋಷ್ಠಿಯಲ್ಲಿ ಅಧ್ಯಕ್ಷೆ ಜಮುನಾ ತಿಮ್ಮಯ್ಯ, ನಿಯೋಜಿತ ಕಾರ್ಯದರ್ಶಿ ನವೀನ್ ಬೆಳ್ಯಪ್ಪ, ವಲಯ ಸೇನಾನಿ ಪಿ.ಬಿ. ಪೂಣಚ್ಚ ಹಾಗೂ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.