ಸಿದ್ದಾಪುರ, ಮಾ. 29 : ವರದಕ್ಷಿಣೆಯು ಒಂದು ಸಾಮಾಜಿಕ ಪಿಡುಗಾಗಿದ್ದು, ವರದಕ್ಷಿಣೆಯನ್ನು ಸಮಾಜದಿಂದ ಕಿತ್ತೊಗೆಯಲು ಸಂಘಟನೆಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್ ಕರೆ ನೀಡಿದ್ದರು.

ನೆಲ್ಲಿಹುದಿಕೇರಿ ಎಸ್. ಕೆ. ಎಸ್. ಎಸ್. ಎಫ್ ಶಾಖೆಯ 17ನೇ ವಾರ್ಷಿಕೋತ್ಸವದ ಅಂಗವಾಗಿ ಸಂಶುಲ್ ಉಲಮಾ ನಗರದಲ್ಲಿ ಹಮ್ಮಿ ಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವರದಕ್ಷಿಣೆಯ ಕಾರಣದಿಂದಾಗಿ ಹಲವು ಬಡ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸುವಲ್ಲಿ ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಎಸ್. ಕೆ. ಎಸ್. ಎಸ್. ಎಫ್ ಸಂಘಟನೆಯು ಸಾಮೂಹಿಕ ವಿವಾಹ ಮಾಡಿಸುತ್ತಿರುವದು ಶ್ಲಾಘನೀಯ ಎಂದರು.

ಸಮುದಾಯದ ಮೂವರು ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮದ ನೇತೃತ್ವವನ್ನು ಎಸ್‍ಕೆಎಸ್‍ಎಸ್‍ಎಫ್ ಮುಖಂಡ ಪಾಣಕ್ಕಾಡ್ ಸಯ್ಯಿದ್ ಸ್ವಾಭಿಕಲಿ ಶಿಹಾಬ್ ತಂಞಳ್ ವಹಿಸಿದ್ದರು. ವಧು - ವರರಿಗೆ ಬೇಕಾದ ವಸ್ತ್ರ ಮತ್ತು ವಧುವಿಗೆ ತಲಾ 40 ಗ್ರಾಂ ಚಿನ್ನಾಭರಣವನ್ನು ಸಂಘಟನೆ ವತಿಯಿಂದ ಉಚಿತವಾಗಿ ನೀಡಲಾಯಿತು.

ಈ ಸಂದರ್ಭ ಮಾಜಿ ಶಾಸಕ ಕೆ.ಎಂ ಇಬ್ರಾಹಿಂ ಮಾಸ್ಟರ್, ಮೈಸೂರು ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಸಯೀದ್ ಅಹಮ್ಮದ್, ಕಾಂಗ್ರೆಸ್ ಪ್ರಬಾರ ಜಿಲ್ಲಾಧ್ಯಕ್ಷ ಟಿ.ಪಿ ರಮೇಶ್, ನೆಲ್ಲಿಹುದಿಕೇರಿ ಜಮಾಅತ್ ಅಧ್ಯಕ್ಷ ಒ.ಎಂ ಅಬ್ದುಲ್ಲ, ಉಸ್ಮಾನ್ ಹಾಜಿ, ಬಶೀರ್ ಹಾಜಿ, ಎ.ಕೆ ಹಕೀಂ ಮುಂತಾದವರು ಇದ್ದರು.