ಮಡಿಕೇರಿ, ಜೂ.17: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆಯು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಅವರ ಅಧ್ಯಕ್ಷತೆ ಯಲ್ಲಿ ಹಾಗೂ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಉಪಸ್ಥಿತಿಯಲ್ಲಿ, ನ್ಯಾಯಾಧೀಶರು, ನ್ಯಾಯಾವಾದಿಗಳು, ಅಧಿಕಾರಿಗಳು ಮತ್ತಿತರರ ಸಮ್ಮುಖದಲ್ಲಿ ನಡೆಯಿತು.

ಮಾಸಿಕ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಜುಲೈ 9ರಂದು ವಿದ್ಯುತ್‍ಚ್ಛಕ್ತಿ, ಕುಡಿಯುವ ನೀರು, ದೂರವಾಣಿ, ಸಾರ್ವಜನಿಕ ಉಪಯುಕ್ತ ಸೇವೆಗಳು ಮತ್ತಿತರ ಸಂಬಂಧ ಲೋಕ ಅದಾಲತ್ ಆಯೋಜಿಸುವದು, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾನೂನು ಅರಿವು ಶಿಬಿರ ಏರ್ಪಡಿಸುವ ಸಂಬಂಧ ಸಮಾಲೋಚನೆ ನಡೆಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಿವಿಧ ಇಲಾಖೆ ಗಳೊಂದಿಗೆ ಜೊತೆಗೂಡಿ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮದ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರ ದೊಂದಿಗೆ ಕೈಜೋಡಿಸುವಂತೆ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಕೋರಿದರು.

ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಅರಿವು ಮೂಡಿಸುವದು. ಜೈಲಿನಲ್ಲಿ ಕೈದಿಗಳಿಗೆ ಮನವರಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವದು, ಮಹಿಳೆಯರು, ಮಕ್ಕಳು, ವಿಕಲಚೇತನರು ಮತ್ತಿತರರಿಗೆ ಇರುವ ಕಾನೂನಿನ ಬಗ್ಗೆ ಅರಿವು ಮೂಡಿಸುವದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಉಂಟುಮಾಡುವದು ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಸುಧೀರ್ಘ ಸಮಾಲೋಚನೆ ನಡೆಯಿತು.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಜನತಾ ನ್ಯಾಯಾಲಯ ಉತ್ತಮ ವೇದಿಕೆಯಾಗಿದೆ. ಆ ನಿಟ್ಟಿನಲ್ಲಿ ಬಹಳ ವರ್ಷಗಳ ಕಾಲ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಾಧೀಶರು ಹೇಳಿದರು.

ಪಕ್ಷಕಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡುವದು, ಸೌಹಾರ್ದಯುತವಾಗಿ ಪ್ರಕರಣ ಇತ್ಯರ್ಥಗೊಳ್ಳುವದರಿಂದ ಬಾಂಧವ್ಯ ಹೆಚ್ಚುತ್ತದೆ. ಜನತಾ ನ್ಯಾಯಾಲಯಗಳಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವದು, ಕಡಿಮೆ ಖರ್ಚು, ಮಾನಸಿಕ ನೆಮ್ಮದಿ, ಶೀಘ್ರ ವಿಲೇವಾರಿಗೆ ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು.

ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ಸ್ಥಳೀಯ ಸಂಸ್ಥೆಗಳ ಪ್ರಕರಣಗಳು, ಸಂಸ್ಥೆಗಳಲ್ಲಿ ದಾಖಲಾದ ಪ್ರಕರಣಗಳು, ಬ್ಯಾಂಕ್‍ಗಳು, ಜೀವನಾಂಶ, ಕ್ರಿಮಿನಲ್, ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳು, ಗ್ರಾಹಕರ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳು ಜನತಾ ನ್ಯಾಯಾಲಯದ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಅವರು ವಿವಿಧ ಇಲಾಖೆಗಳ ಸಹಕಾರದಲ್ಲಿ ಕಾನೂನು ಅರಿವು, ನೆರವು ಶಿಬಿರ ಏರ್ಪಡಿಸುವದು, ಪರಿಸರ, ಸ್ವಚ್ಚತೆ ಮತ್ತಿತರ ಕಾರ್ಯಕ್ರಮಗಳ ಆಯೋಜನೆ ಮಾಡುವ ಬಗ್ಗೆ ಹಲವು ಮಾಹಿತಿ ನೀಡಿದರು.

ಒಂದನೇ ಅಪರ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಅನ್ನಪೂರ್ಣೇಶ್ವರಿ, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ರಮೇಶ್ ಬಾಬು, ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್, ಸರ್ಕಾರಿ ವಕೀಲ ಶ್ರೀಧರ್ ನಾಯರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ತಾಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್, ಡಿವೈಎಸ್‍ಪಿ ಕುಮಾರಚಂದ್ರ, ನಗರಸಭೆಯ ಸ್ವಚ್ಛತಾ ಅಧಿಕಾರಿ ನೀಲಾಧರ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಚಿತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ದಮಯಂತಿ, ಜಿಲ್ಲಾ ಕಾರಾಗೃಹ ಅಧೀಕ್ಷಕರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮತ್ತಿತರರು ಇದ್ದರು.