ಸೋಮವಾರಪೇಟೆ,ಜೂ.25: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ, ಪ್ರಮುಖ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೋಟೋ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಪ್ರತಿಭಟನೆಗೂ ಮುಂಚಿತವಾಗಿ ಪೊಲೀಸ್ ಇಲಾಖೆಯ ಅನುಮತಿ ಪಡೆಯದೆ ಅಕ್ರಮ ಕೂಟ ಕಟ್ಟಿಕೊಂಡು, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಸಾರ್ವಜನಿಕ ಶಾಂತಿಭಂಗ ನಡೆಸಿದ ಆರೋಪದಡಿ ಭಜರಂಗದಳ, ಆರ್ಎಸ್ಎಸ್, ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತರ ವಿರುದ್ಧ ಇಲ್ಲಿನ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಅಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾ.ಪಂ. ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ಹಿಂದೂ ಜಾಗರಣಾ ವೇದಿಕೆಯ ಮುಖಂಡರಾದ ಸುಭಾಶ್, ಮಸಗೋಡು ಸುರೇಶ್, ಉಲ್ಲಾಸ್ ತಿಮ್ಮಯ್ಯ, ಬನ್ನಳ್ಳಿ ಗೋಪಾಲ್, ಕಿಬ್ಬೆಟ್ಟ ಮಧು, ರವಿ ಕರ್ಕಳ್ಳಿ ಸೇರಿದಂತೆ ಇತರರ ವಿರುದ್ಧ ಇಲ್ಲಿನ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ತಾ. 22ರಂದು ಹಿಂದೂಪರ ಸಂಘಟನೆಗಳ 150 ರಿಂದ 200 ಮಂದಿ ಕಾರ್ಯಕರ್ತರು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೆ ಮೆರವಣಿಗೆ ನಡೆಸಿ, ಶಾಂತಿಭಂಗ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 143, 144, 341, ಆರ್ಡಬ್ಲೂ 147 ಅನ್ವಯ ಪ್ರಕರಣ ದಾಖಲಾಗಿದೆ.