ಸೋಮವಾರಪೇಟೆ, ಜೂ.28: ಸೋಮವಾರಪೇಟೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದವರ ಮೇಲೆಯೇ ಮೊಕದ್ದಮೆ ದಾಖಲಿಸುವ ಮೂಲಕ ಪೊಲೀಸ್ ಇಲಾಖೆ ಹೋರಾಟಗಳನ್ನು ಹತ್ತಿಕ್ಕುವ ಯತ್ನ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ವತಿಯಿಂದ ನಡೆಯುವ ಹೋರಾಟಗಳನ್ನು ಹತ್ತಿಕ್ಕಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪಕ್ಷಗಳು ಇಂತಹ ಸಂದರ್ಭವನ್ನು ಬಳಸಿಕೊಂಡು ಒಂದು ವರ್ಗದ ಓಲೈಕೆಗೆ ಮುಂದಾಗಿವೆ. ಹಲ್ಲೆಗೊಳಗಾಗುತ್ತಿರುವ ಹಿಂದೂಗಳ ಮಾನ-ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದರು.

ಹಿಂದೂ ಜಾಗರಣಾ ವೇದಿಕೆಯ ಮೋಹನ್ ಮತ್ತು ಕರೀಂ ಬೇಗ್ ನಡುವೆ ವೈಯುಕ್ತಿಕ ವಿಚಾರಕ್ಕೆ ಘರ್ಷಣೆ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿರುವದು ಹಾಸ್ಯಾಸ್ಪದವಾಗಿದೆ. ‘ಮುಂದಿನ ಟಿಪ್ಪು ಜಯಂತಿಗೆ ನೀನು ಇರಬಾರದು’ ಎಂದು ಹೇಳಿ ಕೊಲೆ ಯತ್ನಕ್ಕೆ ಕೈಹಾಕಿರುವದು ವೈಯುಕ್ತಿಕವೇ? ಎಂದು ಅಭಿಮನ್ಯು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿದ್ದ ತನ್ನ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ ‘ಮೇಲಿನಿಂದ ಒತ್ತಡ ಇತ್ತು’ ಎನ್ನುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಕರ್ತವ್ಯ ನಿರ್ವಹಿಸುವ ಇಂತಹ ಪೊಲೀಸರು ನಮಗೆ ಬೇಡ. ನಡೆಯದ ಘಟನೆಗಳನ್ನು ಪೊಲೀಸರೇ ಸೃಷ್ಟಿಸಿ ಮೊಕದ್ದಮೆ ದಾಖಲಿಸಿರುವದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಅಕ್ರಮ ಕೂಟ ಕಟ್ಟಿಕೊಂಡು, ಮಾರಕಾಸ್ತ್ರಗಳನ್ನು ಹಿಡಿದು, ಕೋಮು ಪ್ರಚೋದನೆ ಭಾಷಣ ಮಾಡಿದ ಆರೋಪಗಳನ್ನು ತನ್ನ ಮೇಲೆ ಹೊರಿಸಲಾಗಿದ್ದು, ಇವುಗಳನ್ನು ರುಜುವಾತುಪಡಿಸಿದರೆ ತಾನು ರಾಜಕೀಯ ಸನ್ಯಾಸ ಸ್ವೀಕರಿಸಲು ಸಿದ್ದನಿದ್ದೇನೆ. ಕೊಡಗಿನಲ್ಲಿ ಟಿಪ್ಪು ಜಯಂತಿಯ ನಂತರ ಇಸ್ಲಾಂ ಮೂಲಭೂತವಾಧಿ ಸಂಘಟನೆ ಗಳಿಂದ ನಿರಂತರ ಅಶಾಂತಿ ಸೃಷ್ಟಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವದೇ ಕಾರಣಕ್ಕೂ ಟಿಪ್ಪು ಜಯಂತಿಗೆ ಅವಕಾಶ ನೀಡಬಾರದು ಎಂದರು. ಕೊಡಗಿನಲ್ಲಿ ಕೆಎಫ್‍ಡಿ, ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೊಡಗಿಗೆ 1800 ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ. ಜಿಲ್ಲೆಯ ಈರ್ವರು ಶಾಸಕರು ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಕಾಣಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಅಭಿವೃದ್ಧಿ ನಿಂತ ನೀರಾಗಿದೆ. ಕಾಂಗ್ರೆಸ್ ಮುಖಂಡರು ಜಿಲ್ಲೆಯ ಶಾಸಕರು ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಸರ್ಕಾರದಿಂದ ಕೊಡಗಿಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಸ್.ಆರ್. ಸೋಮೇಶ್, ಯುವ ಮೊರ್ಚಾ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಅವರುಗಳು ಉಪಸ್ಥಿತರಿದ್ದರು.