ಸೋಮವಾರಪೇಟೆ, ಜೂ. 22: ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳು ಸಾರ್ವಜನಿಕ ರೊಡನೆ ಉಡಾಫೆಯಿಂದ ವರ್ತಿಸು ತ್ತಿರುವ ಬಗ್ಗೆ ಹಲವು ಆರೋಪಗಳು ಕೇಳಿಬರುತ್ತಿದ್ದು, ಕರ್ತವ್ಯದಲ್ಲೂ ಸಮರ್ಪಕತೆ ತೋರುತ್ತಿಲ್ಲ. ಈ ಹಿನ್ನೆಲೆ ವಲಯಾರಣ್ಯಾಧಿಕಾರಿಯನ್ನು ಅಮಾನತುಗೊಳಿಸುವಂತೆ ಇಲ್ಲಿನ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾ.ಪಂ. ಸಭಾಂಗಣದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ತಾಲೂಕಿನ ಜಿ.ಪಂ. ಹಾಗೂ ತಾ.ಪಂ. ಸದಸ್ಯರ ಸಮ್ಮುಖದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೋಮವಾರಪೇಟೆ ವಲಯಾರಣ್ಯಾಧಿಕಾರಿ ಮೊಹಿಸಿನ್ ಬಾಷಾ ಅವರ ಕಾರ್ಯ ವೈಖರಿ ಬಗ್ಗೆ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ವಿಷಯ ಪ್ರಸ್ತಾಪಿಸಿದರು.

ಇಲಾಖೆಯ ಕಚೇರಿಯಲ್ಲಿ ಕಳೆದ 5 ವರ್ಷಗಳಿಂದ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿಯೋರ್ವಳನ್ನು ಏಕಾಏಕಿ ತೆಗೆದು ಹಾಕಿದ್ದು, ಕಾಡಾನೆ ಹಾಗೂ ಹುಲಿ ಧಾಳಿಗೆ ಸಂಬಂಧಿಸಿದಂತೆ ತುರ್ತು ನಿಗಾ ವಹಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ತಾಲೂಕಿನ ಸೂರ್ಲಬ್ಬಿ, ಗರ್ವಾಲೆ, ಅಳುವಾರ, ಸಿದ್ದಲಿಂಗಪುರ, ಕಾಜೂರು ಇನ್ನಿತರ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚುತ್ತಿದ್ದು, ಜನ ಮತ್ತು ಜಾನುವಾರುಗಳ ಜೀವಕ್ಕೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆ ಪರಿಹಾರದ ಮೊತ್ತವನ್ನು ನೀಡುತ್ತಿಲ್ಲ. ದೂರು ನೀಡಲು ಹೋದವರ ಮೇಲೆ ಮೊಕದ್ದಮೆ ದಾಖಲು ಮಾಡುತ್ತೇನೆ ಎಂದು ಗದರಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸಭೆಯ ಗಮನಕ್ಕೆ ತಂದರು.

ವಲಯ ಅರಣ್ಯಾಧಿಕಾರಿ ಮೊಹಿಸಿನ್ ಬಾಷಾ ಕರ್ತವ್ಯ ಲೋಪವೆಸಗುತ್ತಿರುವ ಬಗ್ಗೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಜಿಲ್ಲಾ ಪಂಚಾಯಿತಿಯ ಸದಸ್ಯ ಪುಟ್ಟರಾಜು ಮತ್ತು ಪೂರ್ಣಿಮ ಗೋಪಾಲ್ ಅವರುಗಳೂ ದನಿಗೂಡಿಸಿದರು.

ವಲಯ ಅರಣ್ಯಾಧಿಕಾರಿಗಳ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲು ನಿರ್ಣಯ ಕೈಗೊಳ್ಳುವಂತೆ ಶಾಸಕರು ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ, ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿಯನ್ನು ಕೇವಲ ಕೆಲಸದ ಒತ್ತಡ ಹೆಚ್ಚಿದ್ದಾಗ ಮಾತ್ರ ಕರೆದುಕೊಳ್ಳಲಾಗುತ್ತಿದ್ದು, ಆಕೆ ಇಲಾಖೆಯ ಅಧಿಕೃತ ಸಿಬ್ಬಂದಿಯಲ್ಲ ಎಂದು ಸಮರ್ಥಿಸಿಕೊಂಡರು.

‘ನೀವು ಸಾರ್ವಜನಿಕರೊಂದಿಗೆ ವಿನಯದಿಂದ ವರ್ತಿಸುತ್ತಿಲ್ಲ, ಅರಣ್ಯಾಧಿಕಾರಿಯಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಿಮ್ಮ ಮೇಲೆ ತುಂಬಾ ದೂರುಗಳಿವೆ. ನಿಮ್ಮನ್ನು ಅಮಾನತುಗೊಳಿಸಲು ಏಕೆ ಕ್ರಮ ಕೈಗೊಳ್ಳಬಾರದು’ ಎಂದು ಶಾಸಕ ಅಪ್ಪಚ್ಚು ರಂಜನ್ ಪ್ರಶ್ನಿಸಿದರು. ಈ ಸಂದರ್ಭ ಸಭೆಯಲ್ಲಿದ್ದ ಬಹುತೇಕ ಮಂದಿ ಅಧಿಕಾರಿ ವಿರುದ್ಧ ಅಮಾನತುಗೊಳಿಸುವ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆ ತೀರ್ಮಾನ ಕೈಗೊಳ್ಳಲಾಯಿತು.

ಪಹಣಿ ಪತ್ರದಲ್ಲಿ ಬೆಳೆಯ ವಿವರ ಇಲ್ಲದಿರುವದರಿಂದ ಬೆಳೆಗಾರರಿಗೆ ಸಾಲ ಮತ್ತು ಸರ್ಕಾರದ ಸಹಾಯ ಧನವನ್ನು ಪಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಬೆಳೆಗಾರರಿಗೆ ಪಹಣಿ ಪತ್ರದಲ್ಲಿ ಪತ್ಯೇಕ ಕಲಂ ನಮೂದಿಸುವಂತೆ ತಾಲೂಕು ಪಂಚಾಯಿತಿ ಸದಸ್ಯರಾದ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದರು. ಪ್ರತಿಕ್ರಿಯಿಸಿದ ರಂಜನ್, ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಲಾಗುವದು ಎಂದರು.

ಈ ಸಂದರ್ಭ ಕಂದಾಯ ಇಲಾಖೆಯ ಅಧಿಕಾರಿ ಶಿರಸ್ತೇದಾರ್ ಚಿನ್ನಪ್ಪ ಮಾತನಾಡಿ, ಕೃಷಿಗಾಗಿ ಸಾಲ ಪಡೆಯುವ ಸಂದರ್ಭ ಪಹಣಿಯಲ್ಲಿ ಬೆಳೆ ನಮೂದಾಗಿಲ್ಲವಾದರೆ ಅಂತಹ ರೈತರು ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ಬೆಳೆ ದೃಢೀಕರಣ ಪತ್ರ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.

ತಾಲೂಕಿನ ಕುಶಾಲನಗರ, ಹೆಬ್ಬಾಲೆ, ಶಿರಂಗಾಲ, ಸೋಮವಾರ ಪೇಟೆ, ಶನಿವಾರಸಂತೆ ವಿಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವ್ಯಸನಿಗಳಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹೊರ ಜಿಲ್ಲೆಗಳ ಮೂಲಕ ಜಿಲ್ಲೆಯ ಗಡಿ ಭಾಗಗಳಲ್ಲಿ ಅಮಲು ಪದಾರ್ಥಗಳು ಸರಬರಾಜು ಆಗುತ್ತಿದೆ. ಬಹುತೇಕ ಸಭ್ಯ ಕುಟುಂಬಗಳ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ.

ಪಟ್ಟಣ ಪ್ರದೇಶಗಳ ಔಷಧಿ ಅಂಗಡಿಗಳಲ್ಲಿ ಅಮಲು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಶಾಸಕರು ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್‍ರವರಿಗೆ ಸೂಚನೆ ನೀಡಿದರು. ಪೊಲೀಸ್ ಇಲಾಖೆ ವತಿಯಿಂದ ಕರೆಯಲಾಗುವ ಜನಸಂಪರ್ಕ ಸಭೆಗೆ ಇಲಾಖೆಯವರು ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡವರ ಸಮ್ಮುಖದಲ್ಲಿ ನಡೆಸುತ್ತಾರೆ. ಇದರ ಔಚಿತ್ಯವೇನು? ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಪ್ರಶ್ನಿಸಿದರು.

ತಾಲೂಕಿನ 7ನೇ ಹೊಸಕೋಟೆ ಬಳಿ ಖಾಸಗಿ ಸಂಸ್ಥೆಯೊಂದು 12 ಎಕರೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಹಿಂದೆಯೇ ಇದನ್ನು ತೆರವುಗೊಳಿಸಲು ಸರ್ಕಾರ ಸೂಚಿಸಿತ್ತು. ಆದರೆ ಏಕರೆಗೆ ತಲಾ ರೂ. 3 ಲಕ್ಷದಂತೆ ನಿಗದಿ ಮಾಡಿ ಖಾಸಗಿ ಸಂಸ್ಥೆಯ ಖಾತೆಗೆ ಸಕ್ರಮ ಮಾಡಿಕೊಳ್ಳಲು ಕಂದಾಯ ಇಲಾಖೆಯೇ ಹುನ್ನಾರ ನಡೆಸಿತ್ತು ಎಂದು ಶಾಸಕರು ಗಂಭೀರ ಅರೋಪ ಮಾಡಿದರು. ಈ ಹಿನ್ನೆಲೆಯಲ್ಲಿ ತಕ್ಷಣವೇ ಸರ್ಕಾರವು ಪೈಸಾರಿ ಜಾಗವನ್ನು ತನ್ನ ವಶಕ್ಕೆ ತೆಗೆದು ಕೊಳ್ಳಬೇಕೆಂದು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಹಲವು ಹೋಬಳಿ ಕೇಂದ್ರಗಳ ಮಾಂಸ ಮಾರುಕಟ್ಟೆಯಲ್ಲಿ ಶುಚಿತ್ವವನ್ನು ಕಾಪಾಡುತ್ತಿಲ್ಲ. ಪಟ್ಟಣದ ವಿವೇಕಾನಂದ ವೃತ್ತದ ಬಳಿ ಇರುವ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಸ ಮಾರುಕಟ್ಟೆಯಲ್ಲಿ ತ್ಯಾಜ್ಯಗಳನ್ನು ನೇರವಾಗಿ ಕಕ್ಕೆಹೊಳೆಗೆ ಸುರಿಯಲಾಗುತ್ತಿದೆ. ಕುಶಾಲನಗರ ವ್ಯಾಪ್ತಿಯಲ್ಲು ತ್ಯಾಜ್ಯಗಳನ್ನು ನೇರವಾಗಿ ಕಾವೇರಿ ಹೊಳೆಗೆ ಸುರಿಯಲಾಗುತ್ತಿದೆ ಎಂದು ಸದಸ್ಯರಾದ ಬಾಲಕೃಷ್ಣ ರೈ, ಧರ್ಮಪ್ಪ, ಅಭಿಮನ್ಯು ಕುಮಾರ್, ಭುವನೇಂದ್ರ, ವಿಜು ಚಂಗಪ್ಪ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮಂದಿನ 15 ದಿನಗಳ ಒಳಗಾಗಿ ಸಂಪೂರ್ಣವಾಗಿ ಶುಚಿತ್ವವನ್ನು ಕಾಪಾಡುವಂತೆಯೂ ಮೀನು ಮತ್ತು ಮಾಂಸವನ್ನು ಗಾಜಿನ ಪೆಟ್ಟಿಗೆ ಒಳಗೆ ಇಟ್ಟು ಮಾರಾಟ ಮಾಡುವಂತೆ ಪ್ರತಿ ಪಂಚಾಯಿತಿಗೂ ಸೂಚನೆ ನೀಡಬೇಕೆಂದು ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್‍ಗೆ ಸೂಚನೆ ನೀಡಿದರು. ಇದನ್ನು ಪಾಲಿಸದೆ ಇದ್ದವರ ಪರವಾನಗಿಯನ್ನು ರದ್ದುಗೊಳಿಸುವಂತೆ ಸೂಚಿಸಿದರು. ಹೊಳೆಗೆ ತ್ಯಾಜ್ಯ ಸುರಿಯುವವರ ವಿರುದ್ಧ ಪೊಲೀಸ್ ಪುಕಾರು ನೀಡಲು ಸಾರ್ವಜನಿಕರೇ ಮುಂದಾಗಬೇಕೆಂದು ಶಾಸಕರು ಹೇಳಿದರು.

ತಾಲೂಕಿನ ಹಲವಾರು ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪಂಚಾಯಿತಿ ಅಧ್ಯಕ್ಷರುಗಳ ನಡುವೆ ಹೊಂದಾಣಿಕೆ ಇಲ್ಲದೆ ಇರುವದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ಹಾಜರಿದ್ದ ಹಲವು ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಶಾಸಕರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಚುನಾಯಿತ ಜನಪ್ರತಿನಿಧಿ ಗಳೊಂದಿಗೆ ಅಧಿಕಾರಿಗಳು ಹೊಂದಾ ಣಿಕೆಯಿಂದ ಕೆಲಸ ಮಾಡಬೇಕೆಂದು ಹೇಳಿದರು.

ಶನಿವಾರಸಂತೆ ಗ್ರಾಮ ಪಂಚಾಯಿತಿ, ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವದರಿಂದ ಮಹಿಳೆಯರು ಮುಜುಗರ ಅನುಭವಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ ಮತ್ತು ತಾಲೂಕು ಪಂಚಾಯಿತಿ ಸದಸ್ಯ ಅನಂತಕುಮಾರ್ ಸಭೆಯ ಗಮನಕ್ಕೆ ತಂದಾಗ, ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿಯ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಪರಿಹರಿಸಿಕೊಳ್ಳಬೇಕೆಂದು ಶಾಸಕರು ಹೇಳಿದರು.

ಮೀನುಗಾರಿಕಾ ಇಲಾಖೆ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಸೋಮವಾರಪೇಟೆ ಕಾಫಿ ಮಂಡಳಿ, ಕುಶಾಲನಗರ ಪಟ್ಟಣ ಪಂಚಾಯಿತಿ, ಸೋಮವಾರಪೇಟೆಯ ಬಿ.ಎಸ್.ಎನ್. ಎಲ್. ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವದರಿಂದ ಅವರಿಗೆ ನೋಟೀಸು ನೀಡುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿ ಕಾರಿಗಳಿಗೆ ಸೂಚಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್, ತಾಲೂಕು ವ್ಯಾಪ್ತಿಗೆ ಒಳಪಡುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ನಾಮ ನಿರ್ದೇಶಿತ ಸದಸ್ಯರು, ಉಪಸ್ಥಿತರಿದ್ದರು.