ಶ್ರೀಮಂಗಲ, ಜೂ. 17: ಕೊಡವರ ಹತ್ಯಾಕಾಂಡ ನಡೆದ ದೇವಟ್‍ಪರಂಬು ದುರಂತ ಇತಿಹಾಸದ ಕಠೋರ ಸತ್ಯವನ್ನು ದೃಢೀಕರಿಸುವ ಮೂಲಕ ಸಿ.ಎನ್.ಸಿ. ಸ್ಮಾರಕ ನಿರ್ಮಿಸಿದ್ದನ್ನು ಸಮರ್ಥಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ, ಅಂತೆಯೇ ನಿರ್ಮಲ ಮನಸ್ಸಿನಿಂದ ಸಮಸ್ಯೆ ಬಗೆಹರಿಸಲು ಕಾಳಜಿ ತೋರುತ್ತಿರುವ ಶಾಸಕ ಅಪ್ಪಚ್ಚು ರಂಜನ್, ಶಾಸಕಿ ವೀಣಾ ಅಚ್ಚಯ್ಯ ಅವರ ಪ್ರಯತ್ನವನ್ನು ಹಾಗೂ ದೇವಟ್ ಪರಂಬುವನ್ನು ರಾಷ್ಟ್ರೀಯ ಸ್ಮಾರಕವಾಗಿ ನಿರ್ಮಿಸಲು ಒತ್ತಾಯ ಹೇರುತ್ತಿರುವ ರಾಜ್ಯದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಅವರ ನಿಲುವನ್ನು ಸಿ.ಎನ್.ಸಿ. ಸ್ವಾಗತಿಸುತ್ತದೆ. ಆದರೆ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಒಂದು ಕಡೆ ಸರಕಾರ ಮತ್ತು ಜನಪ್ರತಿನಿಧಿಗಳು ಹಾಗೂ ಮತ್ತೊಂದು ಕಡೆ ಕೊಡವರ ಮಧ್ಯೆ ದ್ವಿಪಕ್ಷೀಯ ಮಾತು-ಕತೆ ನಡೆಯಬೇಕೆ ವಿನಃ ಸ್ಮಾರಕವನ್ನು ಭಗ್ನಗೊಳಿಸಿದ
ವಿಕೃತÀ ಮನಸ್ಥಿತಿಯ ವರ್ಗವನ್ನು ಬೆಂಬಲಿಸುತ್ತಿರುವ ಮೂರನೇ ವ್ಯಕ್ತಿಗಳೊಂದಿಗೆ ಅವಶ್ಯಕತೆ ಇಲ್ಲ ಎಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದ್ದಾರೆ.
ಪೊನ್ನಂಪೇಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲು ಸ್ಮಾರಕವನ್ನು ಹಿಂದಿನ ಸ್ಥಿತಿಗೆ ಮರು ಸ್ಥಾಪಿಸಬೇಕು. ಪ್ರಾತಿನಿಧಿಕ ರಾಜಕಾರಣದ ಆಶ್ರಯದಲ್ಲಿ ರಕ್ಷಿಸಲ್ಪಟ್ಟಿರುವ ಆರೋಪಿಗಳನ್ನು ಬಂಧಿಸಿದ ನಂತರವೇ ಮುಂದಿನ ಮಾತುಕತೆ ನಡೆಸುವದು ಸೂಕ್ತವಾಗಿದೆ. ದೇವಟ್‍ಪರಂಬು, ದೇವಮಂದ್ ಕೊಡವರ ಭಾವನಾತ್ಮಕ ಶ್ರದ್ಧಾ ಕೇಂದ್ರವಾಗಿದ್ದು ಅಲ್ಲಿ ಸ್ಮಾರಕಕ್ಕೆ ಹಾನಿ ಮಾಡುವದರ ಮೂಲಕ ಕಿಡಿಗೇಡಿಗಳು ಇಡೀ ಕೊಡವರ ಸಾಕ್ಷಿ ಪ್ರಜ್ಞೆಯನ್ನು ಕೆಣಕಿದಂತಾಗಿರುವದರಿಂದ ಕೊಡವರಿಗೆ ಸೂರಿನಂತಿರುವ ಸರ್ವ ಕೊಡವ ಸಮಾಜಗಳು ಮತ್ತು ಕೊಡವ ಸಂಘ-ಸಂಸ್ಥೆಗಳು ಅಮ್ಮತ್ತಿ ಕೊಡವ ಸಮಾಜದಲ್ಲಿ ಸಮಾವೇಶಗೊಂಡು ತೆಗೆದುಕೊಂಡ ನಿರ್ಣಯದಂತೆ ದೇವಟ್‍ಪರಂಬುವಿನ ತಾರ್ಕಿಕ ಅಂತ್ಯದವರೆಗೆ ಹೋರಾಡಲು ಸಿ.ಎನ್.ಸಿ.ಗೆ ಬೆಂಗಾವಲಾಗಿ ನಿಲ್ಲುವ ಭದ್ರತೆಯನ್ನು ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮಧ್ಯೆ ಕೊಡವರನ್ನು ವಿಂಗಡಿಸಿ ಹಕ್ಕೊತ್ತಾಯವನ್ನು ತಟಸ್ಥಗೊಳಿಸಿ ಹೋರಾಟದ ತೀವ್ರತೆಯನ್ನು ಚಿವುಟಿ ಕೊಡವ ಜನಾಂಗದ ಒಗ್ಗಟ್ಟಿನ ಐಕ್ಯತೆಯನ್ನು ಮುರಿಯುವ ಕೆಲಸವನ್ನು ಸಿ.ಎನ್.ಸಿ. ಒಪ್ಪುವದಿಲ್ಲವೆಂದು ಹೇಳಿದರು.
ಕೊಡವ ಸಂಸ್ಕøತಿಯನ್ನು-ಸಂಸ್ಕಾರವನ್ನು ಉಡುಗೆ ತೊಡುಗೆ, ಕೊಡವರ ಸಾಂಪ್ರದಾಯಕ ನೆಲೆ, ಆಭರಣ, ಆಯುಧ, ಮನೆ ಹೆಸರು, ವ್ಯಕ್ತಿ ಹೆಸರುಗಳನ್ನೆಲ್ಲ ತಿರುಚಿ ಇತಿಹಾಸ ಬರೆದರೆ ಅದು ಚರಿತ್ರೆ ಆಗಲಾರದೆಂದು ನಾಚಪ್ಪ ಕಿಡಿಕಾರಿದರು. ಸ್ಮಾರಕವನ್ನು ಕೆಡವಿದ ಕಿಡಿಗೇಡಿಗಳ ಪರ ಸಮರ್ಥಿಸುತ್ತಿರುವ ಮತ್ತು ಸೌಹಾರ್ದ ವೇದಿಕೆಯ ಸ್ವಯಂ ಘೋಷಿತ ನಾಯಕರೆಂದು ನಮ್ಮನ್ನು ನಿರಂತರ ನಿಂದಿಸುತ್ತ ನಮ್ಮ ಮೇಲೆ ಸವಾರಿ ಮಾಡಿ ಕೊಡವರ ನೈಜ ಇತಿಹಾಸವನ್ನು ನಿರಾಕರಿಸುವ ವ್ಯಕ್ತಿಗಳಿಗೆ ಸ್ಮಾರಕದ ಬಗ್ಗೆ ಮಾತನಾಡುವ ಯಾವದೇ ನೈತಿಕತೆ ಇಲ್ಲ ಎಂದು ಎ.ಕೆ. ಸುಬ್ಬಯ್ಯ ಮೇಲೆ ನಾಚಪ್ಪ ಹರಿಹಾಯ್ದರು.
ಸ್ಮಾರಕ ನೆಟ್ಟಿದ್ದೆ ಅಪರಾಧವೆಂದು ಬಿಂಬಿಸಿ ನೋಟೀಸ್ ನೀಡಿರುವ ಅರಣ್ಯ ಇಲಾಖೆ, ಮೀಸಲು ಅರಣ್ಯದಲ್ಲಿ ತಲೆ ಎತ್ತಿರುವ ಇತರ ಜನಾಂಗಗಳ ಧಾರ್ಮಿಕ ಕೇಂದ್ರಗಳ ಬಗ್ಗೆ ಏಕೆ ಮೌನ ವಹಿಸಿದೆ ಎಂದು ಕಿಡಿಕಾರಿದರು.
ದೇವಟ್‍ಪರಂಬುವಿನಲ್ಲಿ ನರಮೇಧ ದುರಂತದಲ್ಲಿ ಹತರಾದ ನಮ್ಮ ಕೊಡವ ಪೂರ್ವಿಕರ ಬಗ್ಗೆ ನೋವು ಮತ್ತು ಯಾತನೆಯನ್ನು ಇಂದಿಗೂ ಎಂದೆಂದಿಗೂ ಅನುಭವಿ ಸುತ್ತಿರುವವರು ಕೊಡವರು ಮಾತ್ರ. ಆ ನೋವು ದುಃಖ ಮುಂದಿನ ಕೊಡವ ಪೀಳಿಗೆಗೂ ವಿಸ್ತರಿಸುತ್ತಲೇ ಇರುತ್ತದೆ. ಹತ್ಯಾಕಾಂಡಕ್ಕೆ ಸಂಬಂಧವೇ ಇಲ್ಲದ ನಿರ್ಭಾವುಕರಾದ ಜನರಿಗೆ ಇದರ ಬಗ್ಗೆ ಗೌರವ ಇಲ್ಲದಿರುವ ದರಿಂದಲೇ ಸ್ಮಾರಕವನ್ನು ಕೆಡವಿದ್ದಾರೆ ಎಂದು ಆರೋಪಿಸಿದರು.
ಐತಿಹಾಸಿಕ ಅಮ್ಮತ್ತಿ ನಿರ್ಣಯದ ಅನ್ವಯ ದೇವಟ್ ಪರಂಬು ಸ್ಮಾರಕ ನಿರ್ಮಾಣದೊಂದಿಗೆ ಕೊಡವ ಅಲ್ಪ ಸಂಖ್ಯಾತರ ರಕ್ಷಣೆಗಾಗಿ ತಾ. 20ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ದಲ್ಲಿ ಪೂರ್ವಾಹ್ನ 10.30 ಗಂಟೆಗೆ ಸಂಘಟನೆ ವತಿಯಿಂದ ಸತ್ಯಾಗ್ರಹ ನಡೆಯಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಮೂಕೋಂಡ ದಿಲೀಪ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶರೀನ್ ಹಾಜರಿದ್ದರು.