ಕೂಡಿಗೆ, ಜೂ. 8 : ಯಡವನಾಡು ಹಾಡಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡ ಮನೆಗಳ ಕಂಬಗಳನ್ನು ನೆಲಕ್ಕುರುಳಿಸಿ, ಅಧಿಕಾರಿಗಳು ಸ್ಥಳದಿಂದ ತೆರಳುವ ಸಂದರ್ಭ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸತೀಶ್, ಸೋಮವಾರಪೇಟೆ ಎಸಿಎಫ್ ಭಾಸ್ಕರ್ ಅವರನ್ನು ಒಳಗೊಂಡಂತೆ ಅರಣ್ಯ ಇಲಾಖೆಯ 25ಕ್ಕೂ ಅಧಿಕ ಅಧಿಕಾರಿಗಳನ್ನು ಹಾಡಿಯ ಜನರು ದಿಗ್ಬಂದನಕ್ಕೊಳಪಡಿಸಿ, ನಾಳೆಯೇ ಸರ್ವೆ ನಡೆಸಬೇಕು, ಸರ್ವೆ ನಡೆಸಿದ ಒಂದು ವಾರದೊಳಗೆ ಹಕ್ಕು ಪತ್ರವನ್ನು ವಿತರಿಸಬೇಕೆಂದು ಪಟ್ಟು ಹಿಡಿದು ದಾರಿ ಅಡ್ಡಗಟ್ಟಿ ಪ್ರತಿಭಟನೆ ಮಾಡಿ, ವಾಹನಗಳೂ ಸೇರಿದಂತೆ ಅಧಿಕಾರಿಗಳನ್ನು ತೆರಳದಂತೆ ದಿಗ್ಬಂದನ ಮಾಡಿದ ಘಟನೆ ನಡೆಯಿತು.

ಈ ಸಂದರ್ಭ ಹಾಡಿಯ ಪ್ರಮುಖರುಗಳಾದ ಚಂದ್ರು, ಬೋಜ, ಜೋಯಪ್ಪ, ಸತೀಶ್, ಮುತ್ತಮ್ಮ, ವೇಣು ಸೇರಿದಂತೆ ಹಾಡಿಯ

50ಕ್ಕೂ ಅಧಿಕ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದಲ್ಲಿರುವ ಜೇನುಕುರುಬರ ಹಾಡಿಯ 24 ಕ್ಕೂ ಹೆಚ್ಚು ಕುಟುಂಬಸ್ಥರು ಯಡವನಾಡು ಅರಣ್ಯದೊಳಗೆ ತಾತ್ಕಾಲಿಕವಾಗಿ ಕಂಬಗಳನ್ನು ನೆಟ್ಟು ಮನೆ ನಿರ್ಮಿಸಲು ಸಿದ್ದತೆ ನಡೆಸುತ್ತಿದ್ದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ 25ಕ್ಕೂ ಅಧಿಕ ಅರಣ್ಯ ಸಿಬ್ಬಂದಿಗಳು ಹಾಗು ಅಧಿಕಾರಿಗಳು ಆ ಕಂಬಗಳನ್ನು ನೆಲಕ್ಕುರುಳಿಸುವ ಮೂಲಕ ಕಿತ್ತೊಗೆಯಲಾಯಿತು.

ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ, ಬಸವನಹಳ್ಳಿ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್ ಸೇರಿದಂತೆ ನೂರಾರು ಜೇನುಕುರುಬರ ಕುಟುಂಬದ ಪ್ರಮುಖರು ಅರಣ್ಯಾಧಿಕಾರಿಗಳ ವಾಹನ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು

ಸೇರಿದಂತೆ ಹಾಡಿಯ ಅಂಚಿನ ಪ್ರದೇಶದಿಂದ ಮುಖ್ಯ ರಸ್ತೆಗೆ ತೆರಳದಂತೆ ಬೃಹತ್ತಾದ ಕಲ್ಲುಗಳನ್ನು ದಾರಿಗೆ ಅಡ್ಡಗಟ್ಟಿ ಬೃಹತ್ ಪ್ರತಿಭಟನೆ ಮಾಡಿದರು.

ಜೇನುಕುರುಬರ ಕುಟುಂಬಸ್ಥರ ಪ್ರಮುಖ ಬೇಡಿಕೆಗಳಾದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಗ್ರಾಮದಲ್ಲಿ ಪುರಾತನ ಕಾಲದಿಂದಲೂ 25ಕ್ಕೂ ಅಧಿಕ ಕುಟುಂಬಗಳು ವಾಸ ಮಾಡಿರುವ ಹಳೆಯ ಮನೆಗಳು, ಜಮೀನು ಹಾಗೂ ರುದ್ರಭೂಮಿ ಮತ್ತು ದೇವಾಲಯಗಳ ಕುರುಹುಗಳು ಇರುವದರಿಂದ ಈ ಸ್ಥಳವನ್ನು ತಮಗೆ ನೀಡಬೇಕು. ಈಗಾಗಲೇ ಈ ವ್ಯಾಪ್ತಿಯಲ್ಲಿರುವ ಅನೇಕ ಕುಟುಂಬಗಳು ಇನ್ನೊಬ್ಬರ ಜಾಗದಲ್ಲಿ ಕೂಲಿ ಕೆಲಸ ಮಾಡಿ, ಜೀವನ ಸಾಗಿಸುತ್ತಿದ್ದೇವೆ. ಈಗ ಇಲಾಖೆಯಿಂದ ಮನೆ ನಿರ್ಮಿಸಿ ಕೊಡುವ ಭರವಸೆಗಳು ಹಾಗೂ ಅರಣ್ಯ ಹಕ್ಕು ಖಾಯ್ದೆಯಡಿ ಹಕ್ಕು ಪತ್ರ ನೀಡುವದಾಗಿ ಕಳೆದ 15 ವರ್ಷಗಳಿಂದ ಹೇಳುತ್ತಾ ಬರುತ್ತಿದ್ದು, ಇದುವರೆಗೂ ಹಕ್ಕು ಪತ್ರ ದೊರೆತಿಲ್ಲ. ಹಾಗೂ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ, ಈ ಹಾಡಿಯ ಜಾಗವನ್ನು ಗುರುತಿಸ ಲಾಗುವದೆಂದು ಹಾಡಿಯ ಜನರಿಗೆ ಮನೆ ನಿರ್ಮಿಸಿ ಕೊಡಲಾಗು ವದು ಎಂಬ ಭರವಸೆಗಳನ್ನು ನೀಡುತ್ತಾ ಬರುತ್ತಿದ್ದಾರೆ ಎಂದು ಸ್ಥಳೀಯ ಅರಣ್ಯ ಸಮಿತಿಯ ಅಧ್ಯಕ್ಷ ರವಿ ಆರೋಪಿಸಿದರು.

ಈ ಸಂದರ್ಭ ಎಸ್.ಎನ್. ರಾಜಾರಾವ್ ಹಾಗೂ ಸ್ಥಳದಲ್ಲಿದ್ದ ಹಾಡಿಯ ಪ್ರಮುಖರು ಅಧಿಕಾರಿ ಗಳೊಂದಿಗೆ ಚರ್ಚಿಸಿ ಯಡವನಾಡು ಜೇನುಕುರುಬರ ಹಾಡಿಯಲ್ಲಿ ಪುರಾತನ ಕಾಲದ ಪುರಾವೆಗಳು ದೊರೆತಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಜಂಟಿಯಾಗಿ ಸರ್ವೆಯ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಹೇಳುತ್ತಾ ಬರುತ್ತಿದ್ದು, ಇದುವರೆಗೂ ಯಾವದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ನಾವು ಕೈ ಜೋಡಿಸಿದ್ದೇವೆ. ಆದಷ್ಟು ಬೇಗ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅಧಿಕಾರಿಗಳು ತಾ 16 ರಂದು ಜಂಟಿ ಸರ್ವೆ ನಡೆಸಲಾಗುವದು ಎಂದು ಹೇಳಿದರು.

-ಕೆ.ಕೆ.ನಾಗರಾಜಶೆಟ್ಟಿ.