ಕುಶಾಲನಗರ, ಜೂ. 21: ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡ ಹಾರಂಗಿ ಉದ್ಯಾನವನ ಯೋಜನೆ ಮತ್ತೆ ನೆನೆಗುದಿಗೆ ಬಿದ್ದಿದೆ. ರೂ. 5 ಕೋಟಿಗೂ ಅಧಿಕ ವೆಚ್ಚದಲ್ಲಿ 4 ವರ್ಷಗಳ ಹಿಂದೆ ಚಾಲನೆಗೊಂಡ ಕಾಮಗಾರಿ ಸಂಪೂರ್ಣ ಕಳಪೆಯೊಂದಿಗೆ ದುರುಪಯೋಗದ ಆರೋಪದ ಅಡಿಯಲ್ಲಿ ಲೋಕಾಯುಕ್ತ ಮೆಟ್ಟಿಲೇರಿದ ಹಾರಂಗಿ ಉದ್ಯಾನವನ ಯೋಜನೆಯ ಉದ್ಘಾಟನೆಗೆ ತಾ. 17 ರಂದು ನಿಗದಿಯಾದ ಮುಹೂರ್ತ ಇದೀಗ ಕೈಕೊಟ್ಟಿದೆ.
ಸಂಪೂರ್ಣ ಕಳಪೆಯೊಂದಿಗೆ ಹಲವು ಹಿರಿಯ ಅಧಿಕಾರಿಗಳ ಮೇಲೆ ಆರೋಪ ಪಟ್ಟಿ ಸಿದ್ದವಾಗಿದ್ದರೂ ಇನ್ನೂ ತನಿಖೆ ಮಾತ್ರ ಲೋಕಾಯುಕ್ತದಲ್ಲಿ ನೆನೆಗುದಿಗೆ ಬೀಳುವದರೊಂದಿಗೆ ಸರಕಾರದ ಕೋಟಿಗಟ್ಟಲೆ ಹಣ ನೀರು ಪಾಲಾಗಿದೆ ಎನ್ನಬಹುದು. ಭದ್ರತೆಯ ನೆಪದಲ್ಲಿ ಪ್ರವಾಸಿಗರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಅಣೆಕಟ್ಟೆ ಅಧಿಕಾರಿಗಳು ಇನ್ನೂ ಈ ಉದ್ಯಾನವನವನ್ನು ಪ್ರವಾಸಿಗರಿಗೆ ನೋಡಲು ಅವಕಾಶ ಕಲ್ಪಿಸುವಲ್ಲಿ ಎಡವುತ್ತಿರುವದಾಗಿ ಸ್ಥಳೀಯ ಸಮಾಜ ಸೇವಕ ಎನ್.ಆರ್. ಪ್ರಶಾಂತ್ ‘ಶಕ್ತಿ’ಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಹಾರಂಗಿ ಅಣೆಕಟ್ಟೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಬಹುತೇಕ ನಿಗೂಢವಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಹಾರಂಗಿ ಪ್ರವಾಸಿ ಮಂದಿರದಲ್ಲಿ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಉದ್ಯಾನವನವನ್ನು ನಿಗದಿತ ಅವಧಿಯೊಳಗೆ ಉದ್ಘಾಟಿಸುವ ಭರವಸೆ ನೀಡಿದ್ದು ಅದೂ ಕೂಡ ಹುಸಿಯಾಗಿದೆ. ಈ ನಡುವೆ ಉದ್ಯಾನವನದಲ್ಲಿ ನಿರ್ಮಾಣಗೊಂಡ ದೀಪಗಳು ಸಂಪೂರ್ಣ ಕೆಟ್ಟು ನಿಂತಿದ್ದು ಇದೂ ಕೂಡ ಕೆಲಸ ನಿರ್ವಹಿಸದಿರುವದು ಕೂಡ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಲು ಪ್ರಮುಖ ಕಾರಣ ಎನ್ನಲಾಗಿದೆ. ಈ ಹಿಂದೆ ಉಸ್ತುವಾರಿ ಸಚಿವರು ಹಗಲು ವೇಳೆ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಸಿದ್ದರಾಗಿದ್ದರೂ ಕ್ಷೇತ್ರದ ಶಾಸಕರು ಇದಕ್ಕೆ ಒಪ್ಪದೆ ರಾತ್ರಿ ವೇಳೆ ಹಾರಂಗಿ ಉದ್ಯಾನವನ ಲೋಕಾರ್ಪಣೆ ಮಾಡಲು ಸೂಚಿಸಿದ್ದು ನೀರಾವರಿ ನಿಗಮದ ಅಧಿಕಾರಿಗಳಿಗೆ ಈ ಯೋಜನೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಒಟ್ಟಾರೆ ಕೋಟಿಗಟ್ಟಲೆ ರೂಪಾಯಿ ಸರಕಾರಿ ಹಣ ಪೋಲಾಗುವದರೊಂದಿಗೆ ನಾಡಿನ ಜನತೆಗೆ ಒದಗಬೇಕಾದ ಅದ್ಭುತ ಮನರಂಜನಾ ಯೋಜನೆ ಸಂಪೂರ್ಣ ನೆಲಕಚ್ಚುವದರೊಂದಿಗೆ ಜನತೆಯ ತೆರಿಗೆಯ ಹಣ ಕಂಡವರ ಪಾಲಾಗಿದೆ ಎಂದರೆ ತಪ್ಪಾಗಲಾರದು. ಇದರೊಂದಿಗೆ ಪ್ರಥಮ ಹಂತದ ರೂ. 5 ಕೋಟಿ ಅನುದಾನ ವೆಚ್ಚವಾದ ಬೆನ್ನಲ್ಲೇ ನಿರ್ಮಾಣಗೊಂಡ ಉದ್ಯಾನವನ ನಿರ್ವಹಣೆಗೆ ಕಳೆದ ಕೆಲವು ವರ್ಷಗಳಿಂದ ಲಕ್ಷಗಟ್ಟಲೆ ಹಣ ವ್ಯಯಿಸಲಾಗಿದೆ ಎನ್ನುವ ದೂರುಗಳು ಕೇಳಿಬಂದಿವೆ.
ಪ್ರಥಮ ಹಂತದ ಯೋಜನೆ ಲೋಕಾರ್ಪಣೆಗೊಳ್ಳದಿದ್ದರೂ ಎರಡನೇ ಹಂತದ ಯೋಜನೆಗೆ ಮತ್ತೆ ಕೋಟಿಗಟ್ಟಲೆ ಹಣ ಬಿಡುಗಡೆ ಯಾಗಿರುವದು ಈ ಉದ್ಯಾನವನದ ಇನ್ನೊಂದು ದುರಂತ ಕಥೆ ಎನ್ನಬಹುದು. ಅಂತರರಾಷ್ಟ್ರೀಯ ತಂತ್ರಜ್ಞಾನದ ಮ್ಯೂಸಿಕಲ್ ಫೌಂಟೇನ್ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಮತ್ತೆ ರೂ. 5 ಕೋಟಿಗೂ ಅಧಿಕ ಹಣ ಇಲ್ಲಿ ವ್ಯಯಿಸಿರುವ ಬಗ್ಗೆ ಮಾಹಿತಿ ಒದಗಿದೆ. ಈ ಸಂಬಂಧ ಜರ್ಮನ್ ತಂತ್ರಜ್ಞರು ಈ ಯೋಜನೆಗೆ ರೂಪುರೇಷೆ ನೀಡಿದರೂ ಕಾಮಗಾರಿ ಮಾತ್ರ ನೆನೆಗುದಿಗೆ ಬಿದ್ದಿದೆ.
ಒಟ್ಟಾರೆ ಉದ್ಯಾನವನ ಲೋಕಾರ್ಪಣೆಗೆ ನೀಡಿದ ಜೂನ್ 17 ರ ಡೆಡ್ಲೈನ್ ಮಾತ್ರ ಮುಗಿದಿದ್ದು ಮುಂದಿನ ಮುಹೂರ್ತ ಫಿಕ್ಸ್ ಆಗಬೇಕಿದೆ.
- ಚಂದ್ರಮೋಹನ್