ಸೋಮವಾರಪೇಟೆ, ಜೂ. 25: ಸೋಮವಾರಪೇಟೆಯಲ್ಲಿ ಕಳೆದ ಕೆಲ ದಿನಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆ ಯತ್ನ ಪ್ರಕರಣದ ವರದಿಯನ್ನು ರಾಜ್ಯ ಗೃಹ ಸಚಿವರಿಗೆ ನೀಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವ ಧೈರ್ಯವನ್ನು ಬ್ಲಾಕ್ ಕಾಂಗ್ರೆಸ್ ತೋರಲಿ ಎಂದು ಬಿಜೆಪಿ ತಿರುಗೇಟು ನೀಡಿದೆ.
ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಮಾಜೀ ಅಧ್ಯಕ್ಷ ಎಸ್.ಜಿ. ಮೇದಪ್ಪ, ತಾ. 19ರಂದು ನಡೆದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಮೋಹನ್ ಮೇಲಿನ ಹಲ್ಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉಲ್ಲೇಖಿಸಿ, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರುಗಳ ಮೇಲೆ ಮೊಕದ್ದಮೆ ದಾಖಲಿಸುವಂತೆ ಬ್ಲಾಕ್ ಕಾಂಗ್ರೆಸ್ ಗೃಹ ಸಚಿವರಿಗೆ ಮನವಿ ಸಲ್ಲಿಸಿರುವದು ಹಾಸ್ಯಾಸ್ಪದವಾಗಿದ್ದು, ಒಂದು ವರ್ಗವನ್ನು ಓಲೈಸುವ ಅದರ ಮುಖವಾಡ ಬಯಲಾಗಿದೆ ಎಂದು ಲೇವಡಿ ಮಾಡಿದರು.
ಸೋಮವಾರಪೇಟೆ ನಗರದಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಂದ ಜನಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ. ಆದರೆ ಕೆಲವು ರಾಜಕೀಯ ಪಕ್ಷದ ನಾಯಕರು ಯಾವದೋ ಒಂದು ವರ್ಗವನ್ನು ಓಲೈಸುವ ಸಲುವಾಗಿ ಅವರ ಪರವಾದ ಹೇಳಿಕೆಗಳನ್ನು ನೀಡುತ್ತ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂತಹವರಿಗೆ ಸಮಾಜದ ಬಗ್ಗೆ ಕಾಳಜಿ ಇದ್ದಲ್ಲಿ ಕರೀಂ ಬೇಗ್ ನಂತಹ ವ್ಯಕ್ತಿಯ ಕುಕೃತ್ಯವನ್ನು ಖಂಡಿಸಲಿ. ಮೋಹನ್ ಹಾಗೂ ಸತೀಶ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ನಡೆಸಿದ ಮತಾಂಧರ ವಿರುದ್ಧವೂ ರಾಜ್ಯದ ಗೃಹ ಸಚಿವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಿ. ಇದನ್ನು ಬಿಟ್ಟು ಹಿಂದೂ ಸಮಾಜದ ಪರವಾಗಿ ಹೋರಾಟ ಮಾಡುವ ಮುಖಂಡರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸುವದು ಆ ಪಕ್ಷದ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಸೋಮವಾರಪೇಟೆಯಲ್ಲಿ ಟಿಪ್ಪು ಜಯಂತಿ ಆಚರಿಸಲು ಉದ್ದೇಶಿಸಿದ ಸಂದರ್ಭ ತಾಲೂಕು ಪಂಚಾಯಿತಿಯ ಆವರಣದಲ್ಲಿದ್ದ ಕರೀಂ ಬೇಗ್ನ ಬೈಕ್ನಲ್ಲಿ ಗಾಂಜಾ ಇತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಕೈಚೆಲ್ಲಿದರು. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕಿದಾಗಲೂ ಕಠಿಣ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ಆತ ಕೊಲೆಯತ್ನದಂತಹ ದುಷ್ಕøತ್ಯಕ್ಕೆ ಕೈಹಾಕಿದ್ದಾನೆ. ಈತನಿಗೆ ಮಂಗಳೂರು ಹಾಗೂ ಕೇರಳದಲ್ಲಿರುವ ಮತಾಂಧ ಮೂಲಭೂತವಾದಿ ಸಂಘಟನೆ ಗಳೊಂದಿಗೆ ಸಂಪರ್ಕವಿದೆ. ಈತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದರೆ ಇದೆಲ್ಲಾ ಹೊರಬರಲಿದೆ ಎಂದು ಮೇದಪ್ಪ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಅದರಂತೆ ಇತ್ತೀಚೆಗೆ ಪಟ್ಟಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಸಂದರ್ಭ ಪ್ರತಿಭಟನೆ ನಡೆಸಿದ್ದೇವೆಯೇ ಹೊರತು ಬೇರೆ ಯಾವದೇ ಕೃತ್ಯ ನಡೆಸಿಲ್ಲ ಎಂದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಮಾಜಘಾತುಕ ಶಕ್ತಿಗಳಿಗೆ ಬೆಂಬಲವಾಗಿ ನಿಂತಿದೆ. ಇವರಿಂದ ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರೀಕ್ಷಿಸಲು ಸಾಧ್ಯವಿಲ್ಲ. ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದ ದಿನದಿಂದ ಅಶಾಂತಿಯ ವಾತಾವರಣ ಆರಂಭಗೊಂಡಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಮೇದಪ್ಪ ಆರೋಪಿಸಿದರು. ಸೋಮವಾರಪೇಟೆಯ ವಸ್ತು ಸ್ಥಿತಿಯ ಬಗ್ಗೆ ವಿರೋಧ ಪಕ್ಷದ ನಾಯಕರು ಹಾಗೂ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ. ರಾಜ್ಯ ಸರ್ಕಾರ ತುರ್ತು ಗಮನಹರಿಸಿ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ಕಾರ್ಯದರ್ಶಿ ಮಹೇಶ್ ತಿಮ್ಮಯ್ಯ, ಪ್ರಮುಖರಾದ ಮಸಗೋಡು ಸುರೇಶ್ ಉಪಸ್ಥಿತರಿದ್ದರು.